ಮಂಗಳೂರು, ಜೂನ್. 13 : ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ಹಾಗೂ ಮಾಂಡ್ ಸೊಭಾಣ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಗರದ ಕಲಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ 15 ದಿನಗಳ ಸಿಮೆಂಟ್ ಶಿಲ್ಪಗಳ ರಚನಾ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾದ ಎಂ. ಸಿ. ರಮೇಶ್ ಅವರು, “ಇಂದಿನ ದಿನಗಳಲ್ಲಿ ಕೈ ಕಸುಬುಗಳು ನಶಿಸುತ್ತಿವೆ ಮತ್ತು ಕಲಾಶಾಲೆಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಲಾವಿದರಿಗೆ ನೆರವಾಗಲು ಅಕಾಡೆಮಿ ಹಲವು ಉತ್ತಮ ಅವಕಾಶಗಳನ್ನು ನೀಡುತ್ತಿದೆ,” ಎಂದರು. ಶಿಬಿರಾರ್ಥಿಗಳನ್ನು ಹುರಿದುಂಬಿಸಿದ ಅವರು, “ಸಾಮಾನ್ಯ ಸಿಮೆಂಟ್, ಕಲ್ಲು ಮತ್ತು ಮರಳು ನಿಮ್ಮ ಕೈಚಳಕದಿಂದ ಅದ್ಭುತ ಕಲಾಕೃತಿಯಾಗಿ ಬದಲಾಗುತ್ತದೆ. ಈ ಕಲಾತ್ಮಕ ಪ್ರಕ್ರಿಯೆಯನ್ನು ನೀವು ಆನಂದಿಸಿ. ಕಲೆಗೆ ಹೆಸರಾದ ಕಲಾಂಗಣದ ಅಂದವನ್ನು ನಿಮ್ಮ ಶಿಲ್ಪಗಳು ಮತ್ತಷ್ಟು ಹೆಚ್ಚಿಸಲಿ,” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿ ಜೆ. ಪಿಂಟೊ ಅವರು, “ಕಲಾಂಗಣವು ಕೇವಲ ಒಂದು ಕಟ್ಟಡವಾಗದೆ, ಕಲೆಯನ್ನು ಸಂಭ್ರಮಿಸುವ ತಾಣವಾಗಬೇಕು ಎಂಬ ಆಶಯದೊಂದಿಗೆ ಆರಂಭವಾಯಿತು. ಇಂದು ಇದು ಕಲೆಯ ಆರಾಧನೆ ನಡೆಸುವ ಪವಿತ್ರ ಸ್ಥಳವಾಗಿ ಗುರುತಿಸಿಕೊಂಡಿದೆ. ಈಗ ಈ ಜಾಗದ ಸೌಂದರ್ಯವನ್ನು ಹೆಚ್ಚಿಸುವ ಕೆಲಸಕ್ಕೆ ಶಿಲ್ಪಕಲಾ ಅಕಾಡೆಮಿ ಕೈಜೋಡಿಸಿರುವುದು ಸಂತಸ ತಂದಿದೆ,” ಎಂದು ಹೇಳುತ್ತಾ ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಕಲಾವಿದರನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಕಲಾವಿದ ಬಾಬುರಾವ್ ನಡೋಣಿ ಅವರು ಕೊಳಲಿನಲ್ಲಿ ‘ವಿಶ್ವಮಾನವ ಗೀತೆ’ಯನ್ನು ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಪೂರ್ವಕ ಚಾಲನೆ ನೀಡಿದರು. ವೇದಿಕೆಯಲ್ಲಿ ಶಿಬಿರದ ನಿರ್ದೇಶಕರಾದ ಕೆ. ನಾರಾಯಣ ರಾವ್, ಮಾಂಡ್ ಸೊಭಾಣ್ ಸಂಸ್ಥೆಯ ಪದಾಧಿಕಾರಿಗಳಾದ ರೊನಿ ಕ್ರಾಸ್ತಾ ಹಾಗೂ ನವೀನ್ ಲೋಬೊ ಉಪಸ್ಥಿತರಿದ್ದರು. ಶಿಲ್ಪಕಲಾ ಅಕಾಡೆಮಿ ಸದಸ್ಯ ಮತ್ತು ಶಿಬಿರದ ಸಂಚಾಲಕರಾದ ಕುಮಾರ್ ವೈ. ಅವರು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ವಿತೊರಿ ಕಾರ್ಕಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಈ ಶಿಬಿರದಲ್ಲಿ ಹಿರಿಯ ಶಿಲ್ಪಿಗಳಾಗಿ ಬಾಬುರಾವ್ ವಿ ನಡೋಣಿ ಬೆಳಗಾವಿ, ಕುಮಾರ್ ಬಾಬು ಘಸ್ತಿ ಬೆಳಗಾವಿ, ವೇಣುಗೋಪಾಲ್ ವಿ. ದಾವಣಗೆರೆ, ವಿಜಯ್ ಕೊಣ್ಣೂರು ಬಾಗಲಕೋಟೆ, ಹನುಮಂತ ಬಾಳಪ್ಪ ಗದ್ಧಿ ಗದಗ, ಭೀಮಸಿ ಹಣಮವ್ವ ಬಾಗೇವಾಡಿ ವಿಜಯಪುರ, ಆನಂದ ಕುಮಾರ್ ದಾವಣಗೆರೆ, ಬಿ.ಎಸ್. ಕುಮಾರಸ್ವಾಮಿ ಚಿತ್ರದುರ್ಗ, ಮಂಜುನಾಥ ಡಿ. ಬಾರ್ಕಿ ಹಾವೇರಿ, ನಿಂಗರಾಜ್ ಎಂ. ವನ್ನೂರ್ ಬೆಳಗಾವಿ, ಸಿ.ವಿ. ರಾಮಕೃಷ್ಣ ಶಿವಮೊಗ್ಗ, ಪರಶುರಾಮ್ ಎಚ್. ಶಿವಮೊಗ್ಗ, ಮರಿಯಪ್ಪ ಡಿ. ಹೊನ್ನಮ್ಮನವರ್ ಹಾವೇರಿ ಹಾಗೂ ಸಹಾಯಕ ಶಿಲ್ಪಿಗಳಾಗಿ ಬಸಪ್ಪ ಹನುಮಂತ ಸುನ್ನಾಳ ಬೆಳಗಾವಿ, ಸಂಜೀವ ರೆಡ್ಡಿ ಸೋರಡೆರ, ಧಾರವಾಡ, ತೀರ್ಥಚಾರ್ ಆರ್.ಕೆ. ಚಿತ್ರದುರ್ಗ, ದೇವು ಬಿ. ಶಿವಮೊಗ್ಗ, ಮನೋಹರ ಜಿ. ದಾವಣಗೆರೆ, ಶೃಂಗಾರ ಎಂ. ಬಾರ್ಕಿ ಹಾವೇರಿ, ನವೀನ್ ಕುಮಾರ್ ವಡ್ಡರ್ ಬಾಗಲಕೋಟೆ, ವಿನಯ್ ಕುಂಬಾರ್ ಜಿ. ಚಿತ್ರದುರ್ಗ, ಅಕ್ಷತಾ ಅನಿ ದಾವಣಗೆರೆ, ಪ್ರಕೃತಿ ಎಚ್.ಪಿ., ಶಿವಮೊಗ್ಗ, ಕಾರ್ತಿಕ್ ಮತ್ತು ಸುವಿತ್ ಎಸ್. ಪತ್ತಾರ್ ಭಾಗವಹಿಸಿದ್ದು ಕೊಂಕಣಿಯ ವಿವಿಧ ಜನಸಮುದಾಯದ ಕಲಾಶಿಲ್ಪಗಳನ್ನು ಸಿಮೆಂಟ್ ಮಾಧ್ಯಮದಲ್ಲಿ ರಚಿಸಲಿರುವರು.

