ಮಂಗಳೂರು, ಜೂನ್ 11:ಧರ್ಮಕ್ಷೇತ್ರ ವಿವಿಧ ಆಯೋಗಗಳ ಕೆಲಸಗಳನ್ನು ಪರಾಮರ್ಶಿಸಲು ಮತ್ತು ಒಗ್ಗಟ್ಟಿನ ಸೇವೆಯನ್ನು ಬಲಪಡಿಸಲು ಮಂಗಳೂರು ಧರ್ಮಕ್ಷೇತ್ರದ ಆಯೋಗಗಳ ಕಾರ್ಯದರ್ಶಿಗಳ ಸಭೆಯು ಜೂನ್ 11 ರಂದು ಬಿಷಪ್ ಹೌಸ್‌ನಲ್ಲಿ ನಡೆಯಿತು.

“ಒಟ್ಟಿಗೆ ಮಿಷನ್‌ನಲ್ಲಿ, ಸಿನೊಡಲ್ ಮತ್ತು ಮಿಷನರಿ ಚರ್ಚ್ ನಿರ್ಮಾಣ” ಎಂಬ ಎಂಬ ಮುಖ್ಯ ಧ್ಯೇಯವಾಕ್ಯದೊಂದಿಗೆ ಈ ಸಭೆಯನ್ನು ಆಯೋಜಿಸಲಾಗಿತ್ತು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಆದ ಪರಮ ಪೂಜ್ಯ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪಾಸ್ಟರಲ್ ಕಮಿಷನ್ ಸಂಯೋಜಕರು ಮತ್ತು ಜುಡಿಶಿಯಲ್ ವಿಕಾರ್ ಆದ ವಂ| ನವೀನ್ ಪಿಂಟೊ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಪ್ರಗತಿ ಪರಿಶೀಲನಾ ಗೋಷ್ಠಿಯನ್ನು ಮುನ್ನಡೆಸಿದರು. ಪ್ರಸ್ತುತ ಚಾಲ್ತಿಯಲ್ಲಿರುವ ಮೂರು ವರ್ಷಗಳ ಧರ್ಮ ಕ್ಷೇತ್ರದ ಪಾಲನಾ ಯೋಜನೆಯು ಧರ್ಮಕ್ಷೇತ್ರದ ವಲಯ (ಡೀನರಿ) ಮತ್ತು ಚರ್ಚ್ ಮಟ್ಟದಲ್ಲಿ ಹೇಗೆ ಅನುಷ್ಠಾನಗೊಳ್ಳುತ್ತಿದೆ ಎಂಬುದನ್ನು ಸಭೆಯಲ್ಲಿ ಮೌಲ್ಯಮಾಪನ ಮಾಡಲಾಯಿತು.

ಧರ್ಮಕ್ಷೇತ್ರದ 22 ಆಯೋಗಗಳ ಕಾರ್ಯದರ್ಶಿಗಳು ತಮ್ಮ ತಮ್ಮ ಇಲಾಖೆಗಳ ವರದಿಯನ್ನು ಮಂಡಿಸಿದರು. ತಾವು ಇದುವರೆಗೆ ಹಮ್ಮಿಕೊಂಡ ಕಾರ್ಯಕ್ರಮಗಳು, ಅದರಲ್ಲಿ ಕಂಡ ಯಶಸ್ಸು ಮತ್ತು ಸವಾಲುಗಳನ್ನು ಹಂಚಿಕೊಂಡರಲ್ಲದೆ, ಮುಂದಿನ ಯೋಜನೆಗಳ ರೂಪುರೇಷೆಗಳನ್ನು ಸಭೆಯ ಮುಂದಿಟ್ಟರು.

ಕಾರ್ಯದರ್ಶಿಗಳನ್ನು ಉದ್ದೇಶಿಸಿ ಮಾತನಾಡಿದ ಬಿಷಪ್ ಪೀಟರ್ ಪಾಲ್ ಸಲ್ಡಾನ್ಹಾ ಅವರು, ಸಿನೊಡಲ್ ಮಾದರಿಯಲ್ಲಿ ಆಯೋಗಗಳು ಮಾಡುತ್ತಿರುವ ವ್ಯವಸ್ಥಿತ ಕೆಲಸಗಳನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ದೇವರ ಸಾಮ್ರಾಜ್ಯದ ನಿರ್ಮಾಣಕ್ಕಾಗಿ ಎಲ್ಲಾ ಆಯೋಗಗಳು ಒಂದಾಗಿ, ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಬೇಕು ಎಂದು ಅವರು ಮಾರ್ಗದರ್ಶನ ನೀಡಿದರು.

ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯು, ಧರ್ಮಕ್ಷೇತ್ರದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸುವ ಹೊಸ ನಿರ್ಧಾರ ಹಾಗೂ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.

