canaratvnews

ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಬೆಳ್ತಂಗಡಿಯ 60ರ ವೃದ್ಧನಿಗೆ 3 ವರ್ಷ ಕಠಿಣ ಸಜೆ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 60 ವರ್ಷದ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತಗತಿ (ಪೊಕ್ಸೊ) ನ್ಯಾಯಾಲಯ–1 ಮೂರು ವರ್ಷಗಳ ಕಠಿಣ ಸಜೆ ವಿಧಿಸಿದೆ. ಈ ಪ್ರಕರಣದ ಸಂತ್ರಸ್ತೆಗೆ ₹2 ಲಕ್ಷ ಪರಿಹಾರ ನೀಡಬೇಕು ಎಂದೂ ನ್ಯಾಯಾಧೀಶರಾದ ಮೋಹನ ಜೆ.ಎಸ್‌ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಅಪರಾಧಿಯನ್ನು ಶಂಕರ ಗೌಡ (60) ಎಂದು ಗುರುತಿಸಲಾಗಿದೆ.

ಪ್ರಕರಣದ ಹಿನ್ನೆಲೆ

ಶಂಕರ ಗೌಡ 2025ರ ಮಾ 21ರಂದು 16 ವರ್ಷದ ಬಾಲಕಿ ಮನೆಯಲ್ಲಿ ಒಬ್ಬಳೇ ಇರುವುದನ್ನು ನೋಡಿ, ಬಲವಂತದಿಂದ ಮನೆಯೊಳಗೆ ನುಗ್ಗಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ವೇಳೆ ಬಾಲಕಿ ಆತನ ಕೈಗೆ ಕಚ್ಚಿ ಹಿಂಬಾಗಿಲಿನಿಂದ ಓಡಿ ತಪ್ಪಿಸಿಕೊಂಡಿದ್ದಳು.  ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.

ಅಂದು ತನಿಖೆ ನಡೆಸಿದ್ದ ಠಾಣೆಯ ಪಿಎಸ್ಐ ಸಮರ್ಥ್ ರವೀಂದ್ರ ಗಾಣಿಗೇರ ಅವರು ಶಂಕರ ಗೌಡ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಸಂಬಂಧ ಸರ್ಕಾರಿ ವಕೀಲರಾದ ಸಹನಾದೇವಿ ಅವರು 10 ಸಾಕ್ಷ್ಯಗಳನ್ನು ವಿಚಾರಣೆ ಒಳಪಡಿಸಿದ್ದರು. ಅಪರಾಧಿಗೆ ಬಿಎನ್ಎಸ್‌ ಸೆಕ್ಷನ್‌ 74 ರ (ಹಲ್ಲೆ ನಡೆಸಿ ಮಹಿಳೆಯ ಮಾನಭಂಗ ಯತ್ನ) ಅಡಿ ಮೂರು ವರ್ಷ ಕಠಿಣ ಸಜೆ ಹಾಗೂ ₹ 20 ಸಾವಿರ ದಂಡ. ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 6 ತಿಂಗಳೂ ಕಾರಾಗೃಹವಾಸ ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

ಬಿಎನ್‌ಎಸ್ ಸೆಕ್ಷನ್‌ 75 (2) ಅಡಿ (ಲೈಂಗಿಕ ಕಿರುಕುಳ) ಶಂಕರನಿಗೆ ಎರಡು ವರ್ಷ ಕಠಿಣ ಸಜೆ ಮತ್ತು ₹ 15 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಅಪರಾಧಿಯು ಮತ್ತೆ ನಾಲ್ಕು ತಿಂಗಳು ಕಾರಾಗೃಹವಾಸ ಅನುಭವಿಸಬೇಕು ಎಂದು ಆದೇಶ ಮಾಡಿದ್ದಾರೆ.

ಎಲ್ಲ ಶಿಕ್ಷೆಗಳು ಒಟ್ಟೊಟ್ಟಿಗೆ ಜಾರಿ ಆಗಲಿವೆ. ದಂಡದ ಮೊತ್ತದಲ್ಲಿ ಅಪರಾಧಿಯು ₹ 50ಸಾವಿರವನ್ನು ಸಂತ್ರಸ್ತೆಗೆ ನೀಡಬೇಕು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ₹ 1.50 ಲಕ್ಷ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

Share News
Exit mobile version