ಮಂಗಳೂರು, ನವೆಂಬರ್ 12: ಕರಾವಳಿ ಭಾಗದ ಜನರ ಬಹುದಿನಗಳ ಕನಸಾದ ಬೆಂಗಳೂರು– ಮಂಗಳೂರು–ಮಡಗಾಂವ್ (ಗೋವಾ) ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡುವ ಸಲುವಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೇಂದ್ರ ಸಚಿವರನ್ನು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕರಾವಳಿಯ ಸಾಂಪ್ರದಾಯಿಕ ಚಂಡೆ ವಾದ್ಯಗಳ ಮೂಲಕ ಸಚಿವರಿಗೆ ಭವ್ಯ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ್ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಬಿಜೆಪಿ ಸ್ಥಳೀಯ ಮುಖಂಡರು ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶುಕ್ರವಾರ ರೈಲಿಗೆ ಚಾಲನೆ:
ಶುಕ್ರವಾರ (ನವೆಂಬರ್ 13) ಮಧ್ಯಾಹ್ನ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನಿಂದ ಹಾಗೂ ಅಶ್ವಿನಿ ವೈಷ್ಣವ್ ಅವರು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಈ ನೂತನ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ನವೆಂಬರ್ 15 ರಿಂದ ಈ ರೈಲು ಸಾರ್ವಜನಿಕರ ನಿಯಮಿತ ಪ್ರಯಾಣಕ್ಕೆ ಲಭ್ಯವಾಗಲಿದೆ.
• ಕಾಮಗಾರಿ ಪರಿಶೀಲನೆ: ಶುಕ್ರವಾರ ಬೆಳಿಗ್ಗೆ ಸಚಿವರು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
• ಘಾಟ್ ಮಾರ್ಗ ಲೋಕಾರ್ಪಣೆ: ಮಂಗಳೂರು ಜಂಕ್ಷನ್ನಲ್ಲಿ ರೈಲಿಗೆ ಚಾಲನೆ ನೀಡಿದ ನಂತರ, ಉದ್ಘಾಟನಾ ವಿಶೇಷ ರೈಲಿನಲ್ಲಿ ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ವಿದ್ಯುದೀಕರಣಗೊಂಡ ಸುಬ್ರಹ್ಮಣ್ಯ ರೋಡ್–ಸಕಲೇಶಪುರ ಘಾಟ್ ರೈಲು ಮಾರ್ಗ ಮತ್ತು ಅಮೃತ್ ಭಾರತ್ ಯೋಜನೆಯಡಿ ನವೀಕರಣಗೊಂಡ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.
• ಉಡುಪಿ ಭೇಟಿ: ಸಂಜೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿರುವ ಸಚಿವರು, ಆಕಾಶವಾಣಿಯ ನೂತನ ಎಫ್ಎಂ ಟ್ರಾನ್ಸ್ಮಿಟರ್ ಅನ್ನು ಉದ್ಘಾಟಿಸಲಿದ್ದಾರೆ.
