ಶಿವಮೊಗ್ಗ, ನ.12: ಜನಪ್ರಿಯವಾಗಿ ‘ಮತಾಂತರ ನಿಷೇಧ ಕಾಯ್ದೆ’ ಎಂದು ಕರೆಯಲ್ಪಡುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ, 2022’ ಅನ್ನು ತಕ್ಷಣವೇ ರದ್ದುಗೊಳಿಸುವಂತೆ ಒತ್ತಾಯಿಸಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಸಾವಿರಾರು ಕ್ರೈಸ್ತರು ಗುರುವಾರ ಶಿವಮೊಗ್ಗದಲ್ಲಿ ಶಾಂತಿಯುತ ಮೌನ ಮೆರವಣಿಗೆ ನಡೆಸಿದರು.

ಅಖಿಲ ಕರ್ನಾಟಕ ಸಂಯುಕ್ತ ಕ್ರೈಸ್ತ ಮಾನವ ಹಕ್ಕುಗಳ ವೇದಿಕೆಯ (KUCFH) ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಘಟಕಗಳ ಸಂಯುಕ್ತಾಶ್ರಯದಲ್ಲಿ ಈ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಮೂರು ಜಿಲ್ಲೆಗಳ ವಿವಿಧ ಪಂಗಡಗಳಿಗೆ ಸೇರಿದ ಧರ್ಮಗುರುಗಳು, ಸನ್ಯಾಸಿನಿಯರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಬೆಳಿಗ್ಗೆ ನಗರದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ನಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಶಿಸ್ತುಬದ್ಧವಾಗಿ ಮೌನ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯ ಉದ್ದಕ್ಕೂ ಯಾವುದೇ ಘೋಷಣೆಗಳನ್ನು ಕೂಗದೆ, ಕೇವಲ ಭಿತ್ತಿಪತ್ರಗಳನ್ನು ಹಿಡಿದು ಶಾಂತಿಯುತವಾಗಿ ತಮ್ಮ ಹಕ್ಕೊತ್ತಾಯ ಮಂಡಿಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿಯ ಪ್ರಮುಖಾಂಶಗಳು:
2022ರ ಈ ಕಾಯ್ದೆಯು ಅಲ್ಪಸಂಖ್ಯಾತ ಸಮುದಾಯದಲ್ಲಿ ನಿರಂತರ ಅನಿಶ್ಚಿತತೆಯನ್ನು ಉಂಟುಮಾಡಿದೆ. ಶಾಂತಿಯುತ ಪ್ರಾರ್ಥನಾ ಸಭೆಗಳ ಮೇಲೂ ಅಕ್ರಮ ಮತಾಂತರದ ಸುಳ್ಳು ಆರೋಪಗಳನ್ನು ಹೊರಿಸಲು ಇದು ದಾರಿ ಮಾಡಿಕೊಡುತ್ತಿದೆ. ಅಲ್ಲದೆ, ಧಾರ್ಮಿಕ ಮತಾಂತರದ ಆಧಾರದ ಮೇಲೆ ವಿವಾಹಗಳನ್ನು ಅಸಿಂಧು ಎಂದು ಘೋಷಿಸುವ ನಿಯಮಗಳು ವಯಸ್ಕರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಂವಿಧಾನಬದ್ಧ ಹಕ್ಕುಗಳಿಗೆ ಅಡ್ಡಿಯಾಗುತ್ತವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಕಾಯ್ದೆಯನ್ನು ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟವು 2023ರ ಜೂನ್‌ನಲ್ಲಿಯೇ ನಿರ್ಧರಿಸಿದ್ದರೂ, ಈವರೆಗೆ ಕಾನೂನನ್ನು ಅಧಿಕೃತವಾಗಿ ಹಿಂಪಡೆಯಲಾಗಿಲ್ಲ. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸಿ, ಕಾಯ್ದೆಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ವೇದಿಕೆಯು ಸರ್ಕಾರವನ್ನು ಒತ್ತಾಯಿಸಿದೆ.



ಮೆರವಣಿಗೆಯಲ್ಲಿ ವೇದಿಕೆಯ ಅಧ್ಯಕ್ಷ ವಂ. ಫಾ. ಸೈಮನ್ ಪಿಂಟೊ ಅವರು ಸ್ವಾಗತ ಕೋರಿದರು. ಮೊನ್ಸಿಂಜರ್ ಸ್ಟ್ಯಾನಿ ಡಿಸೋಜಾ ಪ್ರಾರ್ಥನೆ ನಡೆಸಿಕೊಟ್ಟರು ಮತ್ತು ಮೊನ್ಸಿಂಜರ್ ಜೋಸೆಫ್ ತೋರಂಕರ ಮೆರವಣಿಗೆಗೆ ಚಾಲನೆ ನೀಡಿದರು. ಶಿವಮೊಗ್ಗ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ವೀರೇಶ್ ಮೊರಾಸ್ ಸೇರಿದಂತೆ ಮೂರು ಜಿಲ್ಲೆಗಳ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.

