ಮಂಗಳೂರು, ನ. 12: ಯಶಸ್ವಿನಿ ಮಹಿಳಾ ಮಂಡಲಿಯ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಸಂಭ್ರಮ ಕಾರ್ಯಕ್ರಮವು ಇತ್ತೀಚೆಗೆ ಮಹಿಳಾ ಮಂಡಲಗಳ ಒಕ್ಕೂಟದ ವನಿತಾಂಗಣದಲ್ಲಿ ಜರುಗಿತು.

ಭ್ರಾಮರಿ ಮಹಿಳಾ ಮಂಡಲಿಯ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ಗಾಯತ್ರಿ ಬಿ.ಎಸ್. ಕಾರ್ಯಕ್ರಮ ಉದ್ಘಾಟಿಸಿ, ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸುವ ದೀಪಾವಳಿ ಹಬ್ಬದ ಮಹತ್ವವನ್ನು ವಿವರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಕ್ಕ ಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಸುಮಾ ಮಾನ್ವಿ ಮಾತನಾಡಿ, ಕನ್ನಡ ಭಾಷೆಯ ಪರಂಪರೆ ಮತ್ತು ಇತಿಹಾಸವನ್ನು ತಿಳಿಸುತ್ತಾ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಸಾಹಿತಿಗಳನ್ನು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಚಂಚಲ ತೇಜೋಮಯ ಅವರು ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಹಿಂದಿನ ಪುರಾಣ ಕಥೆಗಳ ಕುರಿತು ಅಧ್ಯಕ್ಷೀಯ ಭಾಷಣ ಮಾಡಿದರು.

ಪೌರ ಕಾರ್ಮಿಕರಿಗೆ ವಿಶೇಷ ಸನ್ಮಾನ:
ಹಬ್ಬದ ಆಚರಣೆಯೊಂದಿಗೆ ಸಮಾಜಮುಖಿ ಕಾರ್ಯವನ್ನೂ ಹಮ್ಮಿಕೊಂಡಿದ್ದ ಮಂಡಲಿಯು, ನಗರದ ಸ್ವಚ್ಛತೆಗೆ ಶ್ರಮಿಸುವ ಮಂಗಳೂರು ಮಹಾನಗರ ಪಾಲಿಕೆಯ 10 ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಿತು.

ಶ್ರೀಮತಿ ರಮಣಿ ಬೊಳೂರು ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ನಾಗವೇಣಿ ಪಿ. ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಕವಿತಾ ಮನೋಹರ್ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರೇಣು ಗಜೇಂದ್ರ ಅವರ ನೇತೃತ್ವದಲ್ಲಿ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂಭ್ರಮದಲ್ಲಿ ಸುಮತಿ ಶೆಣೈ, ವಾರಿಜ, ಅನಿತಾ ಶೇಟ್, ಗೀತಾ ಶೇಟ್, ರಮಣಿ ಉಮೇಶ್, ಶಾಲಿನಿ, ಶ್ರೀರಂಜಿನಿ, ಸರಿತಾ, ಶೋಭಾ ನಾಗೇಶ್, ಅನಿತಾ, ಜಯಲಕ್ಷ್ಮಿ, ಜ್ಯೋತಿ, ವೀಣಾ, ಜಯಶ್ರೀ, ದಯಾಮಣಿ ಸೇರಿದಂತೆ ಮಂಡಲಿಯ ಹಲವು ಸದಸ್ಯರು ಉಪಸ್ಥಿತರಿದ್ದರು.








