canaratvnews

“ವಕ್ಫ್‌ ಪ್ರತಿಭಟನೆ ವೇಳೆ ಪ್ರತಿಭಟನಕಾರರು ಪೊಲೀಸ್‌ ಜೀಪು ಬಳಸಿಲ್ಲ”

ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನ ಅಡ್ಯಾರ್‌ನಲ್ಲಿ ನಿನ್ನೆ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಯ ಕಾರನ್ನು ಬಳಸಿದ ಬಗ್ಗೆ ವಿಡಿಯೋ ಸಮೇತ  ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಕೇಳಿಬಂದಿತ್ತು. ಇದಕ್ಕೆ  ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿಭಟನೆಯ ಸಂದರ್ಭ ಬಂದೋಬಸ್ತಿನಲ್ಲಿದ್ದ ಎಸಿಪಿ (ಸಂಚಾರ ಉಪ ವಿಭಾಗ)ಯವರು ಕಾರ್ರಕ್ರಮ ಮುಗಿದ ಬಳಿಕ ಮಂಗಳೂರು ಕಡೆಗೆ ತೆರಳುವ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದರು.

ಈ ವೇಳೆ ಟೆಂಪೋ ಟ್ರಾವೆಲರ್ ವಾಹನವೊಂದು ಚಾಲಕನ ಅಜಾಗರೂಕತೆಯ ಚಾಲನೆ ಕಾರಣ 16 ವರ್ಷದ ಬಾಲಕನೋರ್ವನಿಗೆ ಢಿಕ್ಕಿ ಹೊಡೆದು ಕಾಲಿಗೆ ಗಾಯವಾಗಿತ್ತು. ಈ ಸಂದರ್ಭ ಅಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಗಾಯಾಳುವಿನ ಕಡೆಯವರು ಎಸಿಪಿಯವರ ಕಾರನ್ನು ನಿಲ್ಲಿಸಿ, ಗಾಯಾಳುವನ್ನು ಚಿಕಿತ್ಸೆಗಾಗಿ ಎಸಿಪಿಯವರಿದ್ದ ಕಾರಿನಲ್ಲಿ ಕಳುಹಿಸಿದ್ದಾರೆ.

ಗಾಯಾಳುವನ್ನು ಅಡ್ಯಾರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಟೆಂಪೋ ಟ್ರಾವೆಲರ್ ವಶಕ್ಕೆ ಪಡೆದು, ಚಾಲಕನನ್ನು ಠಾಣೆಗೆ ಕಳುಹಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತದಲ್ಲಿ ಗಾಯವಾದಾಗ ಪ್ರಥಮ ಚಿಕಿತ್ಸೆ (ಗೋಲ್ಡನ್ ಹವರ್) ಕೊಡಿಸುವುದು ಪೊಲೀಸರ ಕರ್ತವ್ಯವಾಗಿದ್ದು, ಪೊಲೀಸರು ಘಟನೆಯನ್ನು ನೋಡಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಆಸ್ಪತ್ರೆಗೆ ಪೊಲೀಸ್ ಜೀಪಿನ ಚಾಲಕನೊಂದಿಗೆ ಕಳುಹಿಸಿ ಸದರಿ ಮಹಿಳಾ ಸಿಬ್ಬಂದಿಯವರು ಕರ್ತವ್ಯ ಮುಂದುವರಿಸಿರುತ್ತಾರೆ ಎಂದು ತಿಳಿಸಿದ್ದಾರೆ.

 

Share News
Exit mobile version