ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭಾನುವಾರ ಇಲ್ಲಿನ ವಿಶಾಲ ಕೆರೆಯಲ್ಲಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ‘ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ’ ಅಭೂತಪೂರ್ವ ಯಶಸ್ಸು ಕಂಡಿತು. ಸಾರ್ವಜನಿಕರು ಹಾಗೂ ಪ್ರವಾಸಿಗರು ಸೇರಿದಂತೆ ಅಂದಾಜು 2,000ಕ್ಕೂ ಹೆಚ್ಚು ಜನ ಈ ಮೇಳದಲ್ಲಿ ಭಾಗವಹಿಸಿ ವಿವಿಧ ಮೀನಿನ ಖಾದ್ಯಗಳನ್ನು ಸವಿದು ಆನಂದಿಸಿದರು.

ಮೂಲ್ಕಿ–ಮೂಡಬಿದ್ರಿ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಕೆರೆಗೆ ಮೀನುಗಳನ್ನು ಬಿಡುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, “ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ದೇಶದಲ್ಲಿಯೇ ವೈಶಿಷ್ಟ್ಯಪೂರ್ಣವಾದ ಪರಿಸರ ಸ್ನೇಹಿ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ. ಇಲ್ಲಿ ಹಮ್ಮಿಕೊಳ್ಳಲಾಗುವ ಇಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಜೀವ ವೈವಿಧ್ಯತೆ, ಕಲೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುತ್ತವೆ. ಮತ್ಸ್ಯ ಪ್ರಬೇಧಗಳನ್ನು ಗುರುತಿಸಿ, ಬೆಳೆಸಿ, ಅವುಗಳ ಮೂಲ ಆವಾಸ ಸ್ಥಾನಕ್ಕೆ ಬಿಡುವ ಕಾರ್ಯ ಶ್ಲಾಘನೀಯ,” ಎಂದರು.

ತಾಜಾ ಮೀನುಗಳ ಪ್ರದರ್ಶನ ಮತ್ತು ಮಾರಾಟ:
ಪಿಲಿಕುಳದ ಕೆರೆಯಲ್ಲಿ ನೈಸರ್ಗಿಕವಾಗಿ ಬೆಳೆಸಲಾದ ಬಲಿಷ್ಠ ಕಾಟ್ಲಾ, ರೋಹು, ಗೌರಿ, ತಿಲೇಪಿಯಾ ಸೇರಿದಂತೆ ವಿವಿಧ ತಳಿಯ ಮೀನುಗಳನ್ನು ಹಿಡಿದು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು ಹಾಗೂ ತಾಜಾ ಮೀನುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೇಳಕ್ಕೆ ಆಗಮಿಸಿದ್ದ ಸಾವಿರಾರು ಜನ ಕರಾವಳಿಯ ವಿಶಿಷ್ಟ ಮೀನಿನ ಖಾದ್ಯಗಳ ರುಚಿ ಸವಿದರು.

ಕಾರ್ಯಕ್ರಮದಲ್ಲಿ ಪ್ರಾಧಿಕಾರ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಶಿವರಾಮ ಮಲ್ಲಿ, ಎನ್.ಜಿ.ಮೋಹನ್, ಉಪಸಮಿತಿ ಅಧ್ಯಕ್ಷ ಜಿ. ಶ್ರೀನಿಕೇತನ್, ಮತ್ತು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಜನರಲ್ ಮೇನೇಜರ್ ಮಹೇಶ್ ಕುಮಾರ್. ಅತಿಥಿಗಳಾಗಿ ಭಾಗವಹಿಸಿದ್ದರು. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ಹಾಗೂ ಆಡಳಿತಾಧಿಕಾರಿ ಡಾ. ಅಶೋಕ್ ಕೆ.ಆರ್. ಉಪಸ್ಥಿತರಿದ್ದರು.

ಜಗನ್ನಾಥ್ ಕಾರ್ಯಕ್ರಮ ನಿರ್ವಹಿಸಿದರು. ರಾಮಕೃಷ್ಣ ಮರಾಟಿ ವಂದಿಸಿದರು. ಡಾ. ನಿತಿನ್, ಉದಯ ಕುಮಾರ್ ಶೆಟ್ಟಿ ಹಾಗೂ ನಾಗೇಶ್ ಕುಲಾಲ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
