LATEST NEWS

ಸಂತ ಅಲೋಶಿಯಸ್ ವಿವಿಯಲ್ಲಿ ಅಂತರರಾಷ್ಟ್ರೀಯ ತಂತ್ರಜ್ಞಾನ ಸಮ್ಮೇಳನ ‘SACAIM 2026’ ಉದ್ಘಾಟನೆ

ಮಂಗಳೂರು: ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾನಿಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆಯ ಸ್ನಾತಕೋತ್ತರ ವಿಭಾಗಗಳ ಆಶ್ರಯದಲ್ಲಿ ಸುಧಾರಿತ ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ನಿರ್ವಹಣೆ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ‘SACAIM 2026’ ನಗರದ ಅಲೋಶಿಯಸ್ ವಿವಿಯ ಎಐಮಿಟ್ (AIMIT) ಕೇಂದ್ರದಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮುಖ್ಯ ಅತಿಥಿ, ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರಮೇಶ್ ಭಟ್ ಎಂ. ಅವರು, ‘ವೈದ್ಯಕೀಯ ಮತ್ತು ಎಂಜಿನಿಯರಿಂಗ್ ನಡುವಿನ ಸೇತುವೆ: ಸಂಶೋಧನಾ ಪ್ರಶ್ನೆಗಳಿಂದ ಆರೋಗ್ಯ ಕ್ಷೇತ್ರದ ನಾವೀನ್ಯತೆಯವರೆಗೆ’ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಿದರು.

“ಆರೋಗ್ಯ ಕ್ಷೇತ್ರದ ಇಂದಿನ ಸವಾಲುಗಳನ್ನು ಎದುರಿಸುವಲ್ಲಿ ವಿವಿಧ ಶೈಕ್ಷಣಿಕ ವಿಭಾಗಗಳ ನಡುವಿನ ಸಹಯೋಗ ಅತ್ಯಗತ್ಯ. ಕೃತಕ ಬುದ್ಧಿಮತ್ತೆ (AI) ಮತ್ತು ಮಾಹಿತಿ ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆ, ಡಿಜಿಟಲ್ ಮಾಧ್ಯಮಗಳ ಮೂಲಕ ಚರ್ಮರೋಗ ಚಿಕಿತ್ಸೆ ಹಾಗೂ ಆಸ್ಪತ್ರೆ ನಿರ್ವಹಣಾ ವ್ಯವಸ್ಥೆಗಳು ವೈದ್ಯಕೀಯ ರಂಗದಲ್ಲಿ ದೊಡ್ಡ ಕ್ರಾಂತಿ ಸೃಷ್ಟಿಸುತ್ತಿವೆ,” ಎಂದರು.

ಗೌರವ ಅತಿಥಿಯಾಗಿದ್ದ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ರೊನಾಲ್ಡ್ ನಜರೆತ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಜ್ಞಾನವನ್ನು ಸಮಾಜದ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಳಸಬೇಕು ಎಂದು ಕರೆ ನೀಡಿದರು. ಎಐಮಿಟ್ ಕೇಂದ್ರದ ನಿರ್ದೇಶಕ ರೆ. ಡಾ. |ಕಿರಣ್ ಕೋತ್ ಎಸ್‌ಜೆ ಅವರು ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆ, ಸೃಜನಶೀಲತೆ ಹಾಗೂ ವಿಮರ್ಶಾತ್ಮಕ ಚಿಂತನೆಯ ಅಗತ್ಯವನ್ನು ಒತ್ತಿಹೇಳಿದರು.

ಯುಕೆಯ ಲೀಡ್ಸ್ ಬೆಕೆಟ್ ವಿಶ್ವವಿದ್ಯಾನಿಲಯದ ಕಿರಣ್ ವೊಡೆರ್ಹೋಬ್ಲಿ ಹಾಗೂ ಟಾಂಜಾನಿಯಾದ ಮ್ವೆಂಗೆ ಕ್ಯಾಥೋಲಿಕ್ ವಿಶ್ವವಿದ್ಯಾನಿಲಯದ ರೆ. ಡಾ. ಜೆರೋಮ್ ಮಾನ್ಯಹಿ ಎಸ್‌ಜೆ ಅವರು ವರ್ಚುವಲ್ ಮೂಲಕ ಸಂದೇಶ ನೀಡಿದರು.

120 ಸಂಶೋಧನಾ ಪ್ರಬಂಧಗಳ ಮಂಡನೆ:

ಈ ಎರಡು ದಿನಗಳ ಸಮ್ಮೇಳನದಲ್ಲಿ ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ, ಸೈಬರ್ ಭದ್ರತೆ, ಬೃಹತ್ ದತ್ತಾಂಶ ವಿಶ್ಲೇಷಣೆ ಮತ್ತು ನಿರ್ವಹಣಾ ಅಧ್ಯಯನಗಳು ಸೇರಿದಂತೆ ವಿವಿಧ ವಿಷಯಗಳ ಸುಮಾರು 120 ಸಂಶೋಧನಾ ಪ್ರಬಂಧಗಳನ್ನು ಆರು ಪ್ರಮುಖ ವಿಭಾಗಗಳ ಅಡಿಯಲ್ಲಿ ಮಂಡಿಸಲಾಗುತ್ತಿದೆ. ಆರೋಗ್ಯ, ಎಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಸಮಕಾಲೀನ ಸವಾಲುಗಳಿಗೆ ಸಂಶೋಧನೆ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ.

ಆರಂಭದಲ್ಲಿ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆಯ ಡೀನ್ ಡಾ. ಸುಚೇತಾ ವಿಜಯಕುಮಾರ್ ಸ್ವಾಗತಿಸಿದರು. ವಿವಿಯ ಗಾಯನ ತಂಡದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ದೇಶ-ವಿದೇಶಗಳ ಪ್ರಮುಖ ಸಂಶೋಧಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share News