COMMUNITY NEWSLATEST NEWS

ಮಂಗಳೂರಿನಲ್ಲಿ ‘ರಚನಾ ಟ್ರೇಡ್ ಎಕ್ಸ್‌ಪೋ 2027’ಕ್ಕೆ ಸಾಂಕೇತಿಕ ಚಾಲನೆ

ಮಂಗಳೂರು: ರಚನಾ – ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಶನಿವಾರ ಸಂಜೆ ಮಂಗಳೂರಿನ ಹೋಟೆಲ್ ಓಷನ್ ಪರ್ಲ್‌ನಲ್ಲಿ ಸದಸ್ಯರ ಸಮಾವೇಶ ಹಾಗೂ ‘ರಚನಾ ಟ್ರೇಡ್ ಎಕ್ಸ್‌ಪೋ 2027’ರ ಸಾಂಕೇತಿಕ ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ವೃತ್ತಿಪರರ ದೊಡ್ಡ ಸಮೂಹವೇ ಭಾಗವಹಿಸಿದ್ದ ಈ ಸಮಾವೇಶವು, ಪರಸ್ಪರ ವ್ಯವಹಾರಿಕ ಸಂಪರ್ಕ ಬಲಪಡಿಸುವ ಮತ್ತು ಸಮುದಾಯದ ಉದ್ಯಮಶೀಲತೆ ಉತ್ತೇಜಿಸುವ ಹೊಸ ಆಶಯಕ್ಕೆ ಮುನ್ನುಡಿ ಬರೆಯಿತು.

ಯುವ ಉದ್ಯಮಿಗಳಿಗೆ ಪ್ರೋತ್ಸಾಹ ಅಗತ್ಯ: ರಾಯ್ ಕ್ಯಾಸ್ಟೆಲಿನೊ

ಕಾರ್ಯಕ್ರಮದ ಸ್ವಾಗತ ಭಾಷಣ ಮಾಡಿದ ರಚನಾದ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೊ ಅವರು, “ಹಿರಿಯ ಸದಸ್ಯರ ಸುದೀರ್ಘ ಅನುಭವ ಮತ್ತು ಯುವ ಉದ್ಯಮಿಗಳ ನವೀನ ಆಲೋಚನೆಗಳನ್ನು ಸಮನ್ವಯಗೊಳಿಸುವುದು ಇಂದಿನ ಅಗತ್ಯವಾಗಿದೆ. ಯುವಜನರ ಹೆಚ್ಚಿನ ಭಾಗವಹಿಸುವಿಕೆ ಮತ್ತು ನಾಯಕತ್ವಕ್ಕೆ ನಾವೆಲ್ಲರೂ ಅವಕಾಶ ಕಲ್ಪಿಸಬೇಕು. ಪ್ರತಿಯೊಬ್ಬ ಉದ್ಯಮಿಗೂ ಬೆಳೆಯಲು ಸೂಕ್ತ ವೇದಿಕೆ ದೊರೆಯುವ ಮತ್ತು ಅವಕಾಶಗಳನ್ನು ಪರಸ್ಪರ ಹಂಚಿಕೊಳ್ಳುವ ಸಂಘಟನೆಯಾಗಿ ರಚನೆಯನ್ನು ರೂಪಿಸಬೇಕಿದೆ. ಸಂಪರ್ಕ, ಸಹಯೋಗ ಮತ್ತು ಬದ್ಧತೆ ರಚನೆಯನ್ನು ಬಲಪಡಿಸುವ ಪ್ರಮುಖ ಸ್ತಂಭಗಳಾಗಿವೆ,” ಎಂದು ಕರೆ ನೀಡಿದರು.

2027ರ ಫೆಬ್ರವರಿಯಲ್ಲಿ ಮೆಗಾ ಎಕ್ಸ್‌ಪೋ

ಸಂಜೆಯ ಪ್ರಮುಖ ಆಕರ್ಷಣೆಯಾಗಿದ್ದ ‘ರಚನಾ ಟ್ರೇಡ್ ಎಕ್ಸ್‌ಪೋ 2027’ ಮುಂಬರುವ ಫೆಬ್ರವರಿ 26, 27 ಮತ್ತು 28ರಂದು ನಡೆಯಲು ಉದ್ದೇಶಿಸಲಾಗಿದೆ. ಎಕ್ಸ್‌ಪೋದ ಸಂಚಾಲಕರಾದ ಲೆಸ್ಲಿ ರೇಗೊ ಅವರು ಯೋಜನೆಯ ಉದ್ದೇಶಗಳನ್ನು ವಿವರಿಸಿ, “ಉದ್ಯಮಿಗಳು ತಮ್ಮ ಉತ್ಪನ್ನ ಹಾಗೂ ಸೇವೆಗಳನ್ನು ಪ್ರದರ್ಶಿಸಲು, ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು ಮತ್ತು ಹೊಸ ವ್ಯವಹಾರಿಕ ಪಾಲುದಾರಿಕೆಗಳನ್ನು ಬೆಳೆಸಲು ಈ ಎಕ್ಸ್‌ಪೋ ಒಂದು ಅತ್ಯುತ್ತಮ ವೇದಿಕೆಯಾಗಲಿದೆ. ಕರಾವಳಿ ಕರ್ನಾಟಕದ ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಸಂಭ್ರಮಿಸುವ ಈ ಮಹತ್ವದ ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲ ಸದಸ್ಯರು ಸಾಮೂಹಿಕ ಜವಾಬ್ದಾರಿಯಿಂದ ಕೈಜೋಡಿಸಬೇಕು,” ಎಂದರು.

ಲೋಗೋ ಅನಾವರಣ ಮತ್ತು ಗಣ್ಯರ ಸಂದೇಶ

ಕಾರ್ಯಕ್ರಮದಲ್ಲಿ ಟ್ರೇಡ್ ಎಕ್ಸ್‌ಪೋದ ಆಕರ್ಷಕ ಲೋಗೋವನ್ನು ಅನಾವರಣಗೊಳಿಸಿದ ಉದ್ಯಮಿ ಮೈಕಲ್ ಡಿಸೋಜಾ ಅವರು, ಸದಸ್ಯರು ತಮ್ಮ ಉದ್ಯಮಗಳನ್ನು ಪರಸ್ಪರ ಪರಿಚಯಿಸಿಕೊಳ್ಳುವ ಮೂಲಕ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದರು. ಕೆಲವು ಸಾಂಪ್ರದಾಯಿಕ ಉದ್ಯಮಗಳು ಮುಚ್ಚಿಹೋಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹೊಸ ಉದ್ಯಮಗಳ ಉಗಮವನ್ನು ಸ್ವಾಗತಿಸಿ ಎಕ್ಸ್‌ಪೋಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದರು.

ಮುಖ್ಯ ಅತಿಥಿಯಾಗಿದ್ದ ದೈಜಿವರ್ಲ್ಡ್ ಮಾಧ್ಯಮ ಸಂಸ್ಥೆಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮಾತನಾಡಿ ರಚನಾ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಬೃಹತ್ ಟ್ರೇಡ್ ಫೇರ್ ಆಯೋಜಿಸುತ್ತಿರುವುದನ್ನು ಶ್ಲಾಘಿಸಿದ ಅವರು, ಉದ್ಯಮಿಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಅನ್ವೇಷಿಸಬೇಕು ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಯು ಸಮುದಾಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ಮತ್ತೊಬ್ಬ ಯುವ ಮುಖಂಡ ಡಿಯೋನ್ ಮೊಂತೆರೊ ಮಾತನಾಡಿ, ಯುವಜನರು ಕೇವಲ ವಿದೇಶಿ ಉದ್ಯೋಗಗಳಿಗೆ ಸೀಮಿತವಾಗದೆ, ಸ್ವದೇಶದಲ್ಲೇ ಉದ್ಯಮಗಳನ್ನು ಸ್ಥಾಪಿಸುವತ್ತ ಗಮನ ಹರಿಸಬೇಕು. ವಿದೇಶದಲ್ಲಿ ಶಿಕ್ಷಣ ಪಡೆದರೂ ಮರಳಿ ತಾಯ್ನಾಡಿನಲ್ಲಿ ವ್ಯವಹಾರ ಆರಂಭಿಸಿ ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಯುವಕರಿಗೆ ಪ್ರೋತ್ಸಾಹ ನೀಡಿದರು.

ಇದೇ ಸಂದರ್ಭದಲ್ಲಿ ಟ್ರೇಡ್ ಎಕ್ಸ್‌ಪೋದ ಅಧಿಕೃತ ಕರಪತ್ರ (Brochure) ಬಿಡುಗಡೆ ಹಾಗೂ ಕಾರುಗಳ ಪ್ರಚಾರದ ಸ್ಟಿಕ್ಕರ್‌ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಉದ್ಯಮ ಬೆಳವಣಿಗೆಯ ಕುರಿತು ಸದಸ್ಯರ ನಡುವೆ ಆಪ್ತ ಸಂವಾದ ನಡೆಯಿತು. ರಚನಾ ಕಾರ್ಯದರ್ಶಿ ಅಲ್ರಾನ್ ರೊಡ್ರಿಗಸ್ ವಂದಿಸಿದರು.

Share News