ಮಂಗಳೂರು: ಬಂಟ ಸಮುದಾಯದ ಗ್ರಾಮ ಪ್ರತಿನಿಧಿಗಳನ್ನು ಒಂದೆಡೆ ಸೇರಿಸಿ ಸರಕಾರದ ವಿವಿಧಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮ ಸರ್ವರಿಗೂ ಮಾದರಿಯಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಹೇಳಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ಇಂದು ಪುರಭವನದಲ್ಲಿ ಜರಗಿದ ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿ ಹಾಗೂ ಗ್ರಾಮ ಪ್ರತಿನಿಧಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಂತಹ ವಿಶಾಲ ದೇಶದಲ್ಲಿ ವ್ಯವಸ್ಥೆಯ ದೋಷ ಹಾಗೂ ಮಾಹಿತಿಯ ಕೊರತೆಯ ಕಾರಣದಿಂದ ಸರಕಾರದ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಎಲ್ಲ ಅರ್ಹರಿಗೆ ತಲುಪಿಸಲು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಹೃದಯ ವೈಶಾಲ್ಯತೆಗೆ ಹೆಸರಾದ ಬಂಟರ ಸಮುದಾಯದ ಈ ವಿಶಿಷ್ಟ ಯೋಜನೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ, ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳು ಶೈಕ್ಷಣಿಕವಾಗಿ ದೇಶದಲ್ಲೇ ಅದ್ವಿತೀಯ ಸಾಧನೆ ಮಾಡಿವೆ. ಆದರೆ, ಇಲ್ಲಿನ ಮಕ್ಕಳು ದೇಶದ ಆಡಳಿತಾತ್ಮಕ ಹುದ್ದೆಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವುದು ಮಾತ್ರ ಖೇದಕರ ಬೆಳವಣಿಗೆಯಾಗಿದೆ ಎಂದರು.
ಅತಿಥಿಯಾಗಿದ್ದ ಆಳ್ವಾಸ್ ಶಿಕ್ಷಣ ಟ್ರಸ್ಟಿನ ಆಡಳಿತ ಟ್ರಸ್ಟಿ ವಿವೇಕ್ ಎಂ.ಆಳ್ವ ಅವರು ಮಾತನಾಡಿ ಮಕ್ಕಳ ಸಾಧನೆಯಲ್ಲಿ ಹೆತ್ತವರ ಪಾತ್ರ ಮಹತ್ತರವಾಗಿದ್ಫು, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನುಗೌರವಿಸುವ ಕಾರ್ಯಕ್ರಮ ಸ್ತುತ್ಯರ್ಹ ಎಂದರು. ಶಾಸಕ ವೈ.ಭರತ್ ಶೆಟ್ಟಿ ಅವರು ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಿ, ಶುಭ ಹಾರೈಸಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೊಡಿಯಾಲ್ ಗುತ್ತು ಅಜಿತ್ ಕುಮಾರ್ ರೈ ಮಾಲಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿ ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಸಿಎ ರಾಮಮೋಹನ ರೈ, ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಮಂಗಳೂರು ತಾಲೂಕಿನ ವಿವಿಧ ಬಂಟರ ಸಂಘಗಳ ಅಧ್ಯಕ್ಷರಾದ ಬಾಳ ಜಗನ್ನಾಥ ಶೆಟ್ಟಿ, ವಸಂತ ಶೆಟ್ಟಿ, ಸಂತೋಷ್ ಶೆಟ್ಟಿ ಶೆಡ್ಡೆ, ರವೀಂದ್ರ ರೈ ಕಲ್ಲಿಮಾರು,ತಿಮ್ಮಯ್ಯ ಶೆಟ್ಟಿ, ಆನಂದ ಶೆಟ್ಟಿ, ಸುಧಾಕರ ಆಳ್ವ, ಮಹಾಬಲ ಚೌಟ, ರತ್ನಾಕರ ಶೆಟ್ಟಿ ಎಕ್ಕಾರ್, ಸತ್ಯಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಾಜದ 137 ಮಂದಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ರಾಮಕೃಷ್ಣ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ಯಶೋದ ಯು.ಶೆಟ್ಟಿ, ಕಾರ್ಯಕ್ರಮದ ಯಶಸ್ಸಿಗೆ ದುಡಿದ ಸಂಚಾಲಕ ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ ಹಾಗೂ ಕೃಷ್ಣ ಪ್ರಸಾದ್ ರೈ ಅವರನ್ನು ಸಮ್ಮಾನಿಸಲಾಯಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಪ್ರಸ್ತಾವನೆಗೈದರು. ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ದಿವಾಕರ ಸಾಮಾನಿ ಚೇಳಾರ್ ಗುತ್ತು ಸ್ವಾಗತಿಸಿದರು. ಡಾ.ಮಂಜುಳಾ ಶೆಟ್ಟಿ ಹಾಗೂ ಪ್ರಕಾಶ್ ಮೇಲಂಟ ಕಾರ್ಯಕ್ರಮ ನಿರೂಪಿಸಿದರು. ಸಹ ಸಂಚಾಲಕ ಅಶ್ವತ್ಥಾಮ ಹೆಗ್ಡೆ ವಂದಿಸಿದರು.



