LATEST NEWS

ಅಥರ್ವ ಬಿಲ್ಡರ್ಸ್‌ನ ‘ಕೃಷ್ಣ’ ವಾಣಿಜ್ಯ ಸಮುಚ್ಚಯ ಹಾಗೂ ಲಯನ್ಸ್ ಸಮುದಾಯ ಭವನಕ್ಕೆ ಶಿಲಾನ್ಯಾಸ

ಮಂಗಳೂರು: ನಗರದ ಹೆಸರಾಂತ ಕಟ್ಟಡ ನಿರ್ಮಾಣ ಸಂಸ್ಥೆ ‘ಅಥರ್ವ ಬಿಲ್ಡರ್ಸ್’ ವತಿಯಿಂದ ನಂತೂರು-ಕದ್ರಿ ರಾಷ್ಟ್ರೀಯ ಹೆದ್ದಾರಿ-66 ರ ಬಳಿ ನಿರ್ಮಾಣವಾಗಲಿರುವ ನೂತನ ವಾಣಿಜ್ಯ ಸಮುಚ್ಚಯ ‘ಕೃಷ್ಣ’ ಹಾಗೂ ಇದರ ನಾಲ್ಕನೇ ಮಹಡಿಯಲ್ಲಿ ತಲೆ ಎತ್ತಲಿರುವ ‘ಲಯನ್ಸ್ ಸಮುದಾಯ ಭವನ’ಕ್ಕೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, “ಲೋಟಸ್ ಪ್ರೊಪರ್ಟಿಸ್ ಮತ್ತು ಅಥರ್ವ ಬಿಲ್ಡರ್ಸ್ ಸಂಸ್ಥೆಗಳು ಮಂಗಳೂರಿನಲ್ಲಿ ಹಲವಾರು ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ನಗರದ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿವೆ. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿರುವ ಈ ಸಂಸ್ಥೆಯ ನೂತನ ‘ಕೃಷ್ಣ’ ಯೋಜನೆಯೂ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ” ಎಂದು ಹೇಳಿ, ನಿರ್ಮಾಣ ಸಂಸ್ಥೆಯ ಪಾಲುದಾರರಾದ ಸಂಪತ್ ಕುಮಾರ್ ಶೆಟ್ಟಿ ಹಾಗೂ ಧನರಾಜ್ ಶೆಟ್ಟಿ ಅವರನ್ನು ಅಭಿನಂದಿಸಿದರು.

ಲಯನ್ಸ್ ಸೇವಾ ಟ್ರಸ್ಟ್ ಕಂಕನಾಡಿ ಪಡೀಲ್ ಅಧ್ಯಕ್ಷ ಹಾಗೂ ಲಯನ್ಸ್ ಜಿಲ್ಲೆ 317 ಡಿ ಮಾಜಿ ಗವರ್ನರ್ ಲಯನ್ ಕೆ.ಸಿ. ಪ್ರಭು ಮಾತನಾಡಿ, “1978ರಲ್ಲಿ ಸ್ಥಾಪಿತವಾದ ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ ಕಳೆದ 49 ವರ್ಷಗಳಿಂದ ಪರಿಸರದ ಜನರಿಗೆ ಹಲವಾರು ಮಾನವೀಯ ಸೇವೆಗಳನ್ನು ನೀಡುತ್ತಾ ಜನಮೆಚ್ಚುಗೆಗೆ ಪಾತ್ರವಾಗಿದೆ. 50ನೇ ವರ್ಷದ ಸುವರ್ಣ ಮಹೋತ್ಸವದ ಸಡಗರದಲ್ಲಿರುವ ಸಂಸ್ಥೆಯು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತನ್ನ ಬಹುಕಾಲದ ಕನಸಾದ ‘ಲಯನ್ಸ್ ಸಮುದಾಯ ಭವನ’ವನ್ನು ಸಾಕಾರಗೊಳಿಸುತ್ತಿದೆ. ಇದಕ್ಕಾಗಿ ನೂತನ ‘ಕೃಷ್ಣ’ ವಾಣಿಜ್ಯ ಸಮುಚ್ಚಯದ ನಾಲ್ಕನೇ ಮಹಡಿಯನ್ನು ಲಯನ್ಸ್ ಸೇವಾ ಟ್ರಸ್ಟ್ ಖರೀದಿಸಲು ನಿರ್ಧರಿಸಿದೆ” ಎಂದರು.

ಕೆನರಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಿ. ವಾಸುದೇವ ಕಾಮತ್ ಅವರು ‘ಕೃಷ್ಣ’ ವಾಣಿಜ್ಯ ಸಂಕೀರ್ಣ ಯೋಜನೆಯ ಕರಪತ್ರವನ್ನು ಬಿಡುಗಡೆಗೊಳಿಸಿ, ಪಾಲುದಾರರಾದ ಸಂಪತ್ ಕುಮಾರ್ ಶೆಟ್ಟಿ, ಧನರಾಜ್ ಶೆಟ್ಟಿ ಹಾಗೂ ಜಾಗದ ಮಾಲಕರಾದ ವಾಮನ ಶೆಣೈ ಅವರಿಗೆ ಶುಭ ಹಾರೈಸಿ, ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿ ಎಂದು ಆಶಿಸಿದರು.

ನಿರ್ಮಾಣ ಸಂಸ್ಥೆಯ ಪರವಾಗಿ ಅಭಿಲಾಷ್ ಕಟೀಲ್ ವಂದಿಸಿದರು.

Share News