LATEST NEWS

ದಸರಾ ವೇಷದ ಮೂಲಕ ಮಾನವೀಯತೆ: ಅನಾರೋಗ್ಯ ಪೀಡಿತರಿಗೆ 1.70 ಲಕ್ಷ ರೂ. ನೆರವು

ಮಂಗಳೂರು: ಮಂಗಳೂರು ದಸರಾ ಸಂಭ್ರಮದಲ್ಲಿ ವಿಶೇಷ ವೇಷ ಧರಿಸಿ ಸಂಗ್ರಹಿಸಿದ 1.70 ಲಕ್ಷ ರೂಪಾಯಿ ದೇಣಿಗೆಯನ್ನು ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ನಾಲ್ವರು ರೋಗಿಗಳಿಗೆ ಹಸ್ತಾಂತರಿಸುವ ಮೂಲಕ ಬಿಜೈ ಫ್ರೆಂಡ್ಸ್ ಕ್ರಿಕೆಟರ್ಸ್ ಹಾಗೂ ಕೊಡಿಯಾಲ್‌ಬೈಲ್ ಫ್ರೆಂಡ್ಸ್ ತಂಡದ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.

ಕಳೆದ ಅಕ್ಟೋಬರ್ 17 ಮತ್ತು 18ರಂದು ಕುದ್ರೋಳಿ ಕ್ಷೇತ್ರದ ಪರಿಸರದಲ್ಲಿ ವಿಶೇಷ ವೇಷ ಧರಿಸಿ ಈ ದೇಣಿಗೆಯನ್ನು ಸಂಗ್ರಹಿಸಲಾಗಿತ್ತು. ಸತತ ಮೂರನೇ ವರ್ಷದ ಈ ಸೇವಾ ಕಾರ್ಯದ ಅಂಗವಾಗಿ ಕುದ್ರೋಳಿ ಕ್ಷೇತ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಫಲಾನುಭವಿಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು.

ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುತ್ತೂರಿನ ಕೃಪಾಲಿ ಕೆ.ಜೆ., ಕಾಲಿನ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಉಳ್ಳಾಲದ ಹೇಮಂತ್, ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಉರ್ವದ ಸಾರ್ಥಕ್ ಹಾಗೂ ಮೆದುಳಿನ ಜ್ವರದಿಂದ ಬಳಲುತ್ತಿರುವ ಆಕಾಶಭವನದ ಸಾನ್ವಿ ಅವರಿಗೆ ಈ ಧನಸಹಾಯವನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, “ವಿಶೇಷ ವೇಷ ಧರಿಸುವ ಮೂಲಕ ಮನರಂಜನೆಯ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಎರಡೂ ತಂಡಗಳ ಕಾರ್ಯ ಶ್ಲಾಘನೀಯ. ಇಂತಹ ಸಮಾಜಮುಖಿ ಕೆಲಸಗಳು ಇತರರಿಗೂ ಪ್ರೇರಣೆಯಾಗಬೇಕು” ಎಂದರು.

ಬಿಜೈ ಮಿತ್ರ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ನವೀನ್ ಚಂದ್ರ ಮಾತನಾಡಿ, “ಇಂತಹ ಮಾನವೀಯ ಸೇವಾ ಕಾರ್ಯಗಳಿಗೆ ಸದಾ ಬೆಂಬಲವಿದ್ದು, ತಂಡದ ಸೇವಾ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತಾರಗೊಳ್ಳಲಿ” ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಬಿಜೈ ಫ್ರೆಂಡ್ಸ್ ಕ್ರಿಕೆಟರ್ಸ್ ಹಾಗೂ ಕೊಡಿಯಾಲ್‌ಬೈಲ್ ಫ್ರೆಂಡ್ಸ್ ತಂಡದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Share News