ಮಂಗಳೂರು: ಮಂಗಳೂರು–ಕುಪ್ಪೆಪದವು ಪರಿಸರದಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಸಮುದಾಯ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಮಾಜಮುಖಿ ಸೇವಾ ಸಂಸ್ಥೆಯಾದ ಮೊರಾಸ್ ಚ್ಯಾರಿಟೇಬಲ್ ಫೌಂಡೇಶನ್ (ಕುಪ್ಪೆಪದವು) ಇದರ ದಶಮಾನೋತ್ಸವ ಕಾರ್ಯಕ್ರಮವು ಕಿಲೆಂಜಾರು ಅರಮನೆ ಸರಕಾರಿ ಪ್ರೌಢಶಾಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಮಂಜೇಶ್ವರ ಚರ್ಚ್‌ನ ಧರ್ಮಗುರುಗಳಾದ ರೆ.ಫಾ. ಎಡ್ವಿನ್ ಪಿಂಟೋ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಫೌಂಡೇಶನ್‌ನ ನೂತನ ವೆಬ್‌ಸೈಟ್ ಅನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕಳೆದ ಹತ್ತು ವರ್ಷಗಳಿಂದ ಫೌಂಡೇಶನ್ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಜನರ ಅಗತ್ಯತೆಗಳನ್ನು ಅರಿತು ನೀಡುತ್ತಿರುವ ಆರ್ಥಿಕ ನೆರವು ಅರ್ಥಪೂರ್ಣವಾಗಿದ್ದು, ಸಂಸ್ಥೆಯು ಜನಮನ್ನಣೆ ಗಳಿಸಿದೆ” ಎಂದು ಶ್ಲಾಘಿಸಿದರು.

ಬೆಂಗಳೂರು ಮಹಾಧರ್ಮಪ್ರಾಂತ್ಯದ ವಿಶ್ರಾಂತ ಆರ್ಚ್‌ಬಿಷಪ್ ಹಾಗೂ ಫೌಂಡೇಶನ್‌ನ ಅಧ್ಯಕ್ಷರಾದ ಅತೀ ವಂದನೀಯ ಪರಮಪೂಜ್ಯ ಡಾ. ಬರ್ನಾಡ್ ಮೊರಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, “ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಕೈಗೊಂಡು ದೇಶ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ, ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೇ ಹಿಂದಿರುಗಿಸುವ ಸಾರ್ಥಕ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಸೇನಾನಿಗಳಾಗಿ ಹಸಿರು ಮತ್ತು ಸ್ವಚ್ಛ ಭೂಮಿಯ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದು ಕರೆ ನೀಡಿದರು.

ಬಂಟ್ವಾಳ–ಸಜಿಪನಡು ಆರೋಗ್ಯ ಕೇಂದ್ರದ ಸಮಾಲೋಚಕಿ ಶ್ರೀಮತಿ ಸುಮನಾ ಕ್ರಾಸ್ತಾ ಅವರು ಮಾತನಾಡಿ, ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆರೋಗ್ಯ, ಲೈಂಗಿಕತೆ ಹಾಗೂ ಲಿಂಗ ಸಮಾನತೆಯ ಕುರಿತು ಸೂಕ್ತ ಅರಿವು ಮೂಡಿಸಬೇಕು ಮತ್ತು ಜಂಕ್‌ಫುಡ್‌ಗಳನ್ನು ತ್ಯಜಿಸಿ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಶಮಾನೋತ್ಸವದ ನೋಡಲ್ ಶಿಕ್ಷಕರಾದ ಶ್ರೀ ಮಾರ್ಕ್ ಮೆಂಡೊನ್ಸಾ ಅವರು ಫೌಂಡೇಶನ್‌ನ ಹತ್ತು ವರ್ಷಗಳ ಸಾಧನೆಯ ವರದಿ ಮತ್ತು ಸಾಕ್ಷ್ಯಚಿತ್ರವನ್ನು ಪ್ರಸ್ತುತಪಡಿಸಿದರು. ಎಸ್.ಡಿ.ಎಂ.ಸಿ. ಸದಸ್ಯರಾದ ಶ್ರೀ ಶೇಖ್ ಅಬ್ದುಲ್ಲಾ ಅವರು ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಫೌಂಡೇಶನ್‌ನ ಪಾತ್ರವನ್ನು ಪ್ರಶಂಸಿಸಿದರು. ಬೆಂಗಳೂರಿನ ಬ್ರಿಲಿಯಂಟ್ ಪ್ರಿಂಟರ್ಸ್‌ನ ಶ್ರೀ ಪೀಟರ್ ಅನಿಲ್ ರೇಗೊ ಅವರು ವಿದ್ಯಾರ್ಥಿಗಳಿಗೆ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಪ್ರೇರಣೆ ನೀಡಿದರು.

ಪ್ರತಿಭಾ ಪುರಸ್ಕಾರ ಮತ್ತು ನೆರವು ವಿತರಣೆ:
ಕಾರ್ಯಕ್ರಮದಲ್ಲಿ 2026ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ಕಿಲೆಂಜಾರು ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಂಗಳೂರಿನ ವಿವಿಧೆಡೆ ಉನ್ನತ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕಲ್ಲಾಡಿ ಪ್ರಾಥಮಿಕ ಶಾಲೆಗೆ ಕಪಾಟು ಹಾಗೂ ಕಿಲೆಂಜಾರು ಪ್ರೌಢಶಾಲೆಗೆ ಇನ್ವರ್ಟರ್ ಅನ್ನು ಹಸ್ತಾಂತರಿಸಲಾಯಿತು. ಅಲ್ಲದೆ, ಶಿಕ್ಷಕರು, ದಾನಿಗಳು, ಫಲಾನುಭವಿಗಳು ಹಾಗೂ ಸಮಿತಿ ಸದಸ್ಯರಿಗೆ ಸ್ಮರಣಿಕೆಯಾಗಿ ಬ್ಯಾಗ್‌ಗಳನ್ನು ಉಡುಗೊರೆಯಾಗಿ ನೀಡಲಾಯಿತು.

ವೇದಿಕೆಯಲ್ಲಿ ಫೌಂಡೇಶನ್‌ನ ಟ್ರಸ್ಟಿಗಳಾದ ಶ್ರೀ ರೆಜಿನಾಲ್ಡ್ ಮೊರಾಸ್, ಶ್ರೀ ಜೋನ್ ಕ್ರೂಜ್ ಮೊರಾಸ್, ಶ್ರೀ ಮಾರ್ಟಿನ್ ಮೊರಾಸ್, ಶ್ರೀ ಜೋಸೆಫ್ ಮೊರಾಸ್ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀ ಸುಧೀರ್ ಜೈನ್, ಸದಸ್ಯರಾದ ಶ್ರೀ ಶಶಿಧರ್ ಶೆಟ್ಟಿ, ಶ್ರೀ ಅಗರಿ ತಿಮ್ಮಪ್ಪ ಶೆಟ್ಟಿ ಮತ್ತು ಶ್ರೀ ಸುಂದರಶಾಂತಿ ಉಪಸ್ಥಿತರಿದ್ದರು.

ಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಬಾಬು ಪಿ.ಎಂ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ರೋಮನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಫೌಂಡೇಶನ್‌ನ ಟ್ರಸ್ಟಿ ಶ್ರೀ ಜೋಸೆಫ್ ಮೊರಾಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
