ಮಂಗಳೂರು: ಮಂಗಳೂರು ನಗರದ ಅತ್ಯಂತ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ನಂತೂರಿನಿಂದ ಬಿಕರ್ನಕಟ್ಟೆವರೆಗಿನ ಪರಿಸರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಮಂಗಳೂರು ಮಹಾನಗರ ಪಾಲಿಕೆ (MCC) ಅಧಿಕಾರಿಗಳ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಪ್ರತಿದಿನ ನರಕಯಾತನೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಮಾಧ್ಯಮಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮೈಸೂರು, ಧರ್ಮಸ್ಥಳ, ಬಂಟ್ವಾಳ, ಮೂಡಬಿದ್ರೆ ಹಾಗೂ ಕಾರ್ಕಳದಂತಹ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಈ ಅತ್ಯಂತ ಬಿಕರಿರುವ ಹೆದ್ದಾರಿ ವಲಯದಲ್ಲಿ ನಾಗರಿಕರ ಗೋಳು ಕೇಳುವವರೇ ಇಲ್ಲದಂತಾಗಿದೆ.

ರಸ್ತೆಯಲ್ಲೇ ಹರಿಯುವ ಒಳಚರಂಡಿ ನೀರು – ತಪ್ಪದ ದುರ್ವಾಸನೆ:
ಬಿಕರ್ನಕಟ್ಟೆ, ಜಯಶ್ರೀ ಗೇಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಳಚರಂಡಿ (UGD) ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು, ಪ್ರತಿಷ್ಠಿತ ಶಾಲೆ- ಕಾಲೇಜು, ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳಿರುವ ಈ ಭಾಗದ ನಾಗರಿಕರು ಪಾಲಿಕೆಗೆ ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದರೂ ಕನಿಷ್ಠ ಸೌಕರ್ಯ ಸಿಕ್ಕಿಲ್ಲ. ಪಾಲಿಕೆಯು ಒಳಚರಂಡಿ ಕಾಮಗಾರಿ ನಡೆಸಲು ಮುಂದಾದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅನುಮತಿ ನೀಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಪರಿಣಾಮವಾಗಿ, ಜಯಶ್ರೀ ಗೇಟ್‌ನಿಂದ ಬಿಕರ್ನಕಟ್ಟೆ ವರೆಗೂ ಚರಂಡಿ ಕೊಳಕು ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಮಳೆಗಾಲದಲ್ಲಂತೂ ಇಡೀ ರಸ್ತೆ ನದಿಯಂತಾಗುತ್ತಿದೆ. ಸಾರ್ವಜನಿಕರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಸ್ಥಳೀಯರು ಎಷ್ಟೋ ಬಾರಿ ಫೋಟೋ ಮತ್ತು ವೀಡಿಯೋ ಕಳುಹಿಸಿ ದೂರು ನೀಡಿದಾಗ ಅಧಿಕಾರಿಗಳು ಬಂದು ಕಾಟಾಚಾರಕ್ಕೆ ಸ್ವಲ್ಪ ಚರಂಡಿ ದುರಸ್ತಿ ಮಾಡಿ ಕೈತೊಳೆದು ಕೊಳ್ಳುತ್ತಿದ್ದಾರೆ.

ಕಗ್ಗತ್ತಲಲ್ಲಿ ಫ್ಲೈ ಓವರ್: ಮಾರ್ಗಸೂಚಿ ಇಲ್ಲದೆ ದಾರಿ ತಪ್ಪುತ್ತಿರುವ ಚಾಲಕರು
ಬಿಕರ್ನಕಟ್ಟೆ ಫ್ಲೈ ಓವರ್ ಬಳಿ ವಾಹನಗಳು ಯಾವ ಕಡೆ ಚಲಿಸಬೇಕೆಂಬ ಯಾವುದೇ ಸ್ಪಷ್ಟ ಮಾರ್ಗಸೂಚಿ ಅಥವಾ ಸೂಚನಾ ಫಲಕಗಳಿಲ್ಲ. ರಾತ್ರಿ ವೇಳೆ ಯಂತೂ ಇಲ್ಲಿ ಕಗ್ಗತ್ತಲು ಆವರಿಸುತ್ತಿದ್ದು, ಕನಿಷ್ಠ ರಿಫ್ಲೆಕ್ಟರ್‌ಗಳನ್ನೂ ಅಳವಡಿಸಿಲ್ಲ. ಕೇವಲ ಹೆಸರಿಗೆ ಮಾತ್ರ ಸಣ್ಣ ಸ್ಟಿಕ್ಕರ್ ಹಾಕಲಾಗಿದ್ದು, ಅವು ರಾತ್ರಿ ಸಂಚರಿಸುವವರಿಗೆ ಕಾಣಿಸುವುದೇ ಇಲ್ಲ. ಇದರಿಂದಾಗಿ ಹೊರಜಿಲ್ಲೆಯ ವಾಹನ ಸವಾರರು ದಾರಿ ತಪ್ಪಿ ಎಲ್ಲೆಂದರಲ್ಲಿ ಸಂಚರಿಸುತ್ತಿದ್ದಾರೆ.

ಜಯಶ್ರೀ ಗೇಟ್ ಮಸೀದಿ ಎದುರಿನ ರಸ್ತೆ ವಿಭಜಕದಲ್ಲಿ ದಾರಿದೀಪಗಳೇ ಇಲ್ಲ. ಫ್ಲೈ ಓವರ್‌ಗೆ ದಾರಿದೀಪದ ಕಂಬಗಳನ್ನು ಅಳವಡಿಸಿ 4 ತಿಂಗಳು ಕಳೆದರೂ ಇನ್ನು ದೀಪಗಳನ್ನು ಹಾಕಲಾಗಿಲ್ಲ. ಬಾಲಯೇಸುವಿನ ಪುಣ್ಯಕ್ಷೇತ್ರದ ಬಳಿ ಇದ್ದ ಯು-ಟರ್ನ್ ಬಂದ್ ಮಾಡಲಾಗಿದ್ದು, ಅಲ್ಲಿ ಸೂಕ್ತ ಬಣ್ಣ ಅಥವಾ ರಿಫ್ಲೆಕ್ಟರ್ ಹಾಕದ ಕಾರಣ ರಾತ್ರಿ ವೇಳೆ ವಾಹನಗಳು ಇಲ್ಲಿ ತೊಂದರೆ ಅನುಭವಿಸುತ್ತಿವೆ.

ಅಪಘಾತ ವಲಯವಾದ ಬಿಕರ್ನಕಟ್ಟೆ – ಜೀಬ್ರಾ ಕ್ರಾಸ್ ಇಲ್ಲ:
ಪಡೀಲ್ ಹಾಗೂ ನಂತೂರು ಕಡೆಯಿಂದ ವಾಹನಗಳು ಅತೀ ವೇಗವಾಗಿ ಸಂಚರಿಸುತ್ತಿದ್ದು, ಜಯಶ್ರೀ ಗೇಟ್, ಚರ್ಚ್ ಮತ್ತು ಮಸೀದಿ ಬಳಿ ಪ್ರತಿದಿನ ಸಾವಿರಾರು ಜನರು ರಸ್ತೆ ದಾಟಲು ಜೀವ ಕೈಯಲ್ಲಿ ಹಿಡಿದು ನಿಲ್ಲಬೇಕಾಗಿದೆ. ಇಲ್ಲಿ ರಸ್ತೆ ದಾಟಲು ಒಂದೇ ಒಂದು ಜೀಬ್ರಾ ಕ್ರಾಸ್ (Zebra Crossing) ಇಲ್ಲ. ಈ ಬಗ್ಗೆ ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯರು ಹಲವು ಬಾರಿ ಮನವಿ ಮಾಡಿದರೂ, ಹೆದ್ದಾರಿ ಅಧಿಕಾರಿಗಳು ಯಂತ್ರ ಇಲ್ಲ, ಸಿಬ್ಬಂದಿ ಇಲ್ಲ ಎಂಬ ನೆಪಗಳನ್ನು ಹೇಳುತ್ತಾ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಪಘಾತಗಳು ನಡೆದಾಗ ಪೊಲೀಸ್ ಇಲಾಖೆಯನ್ನು ದೂಷಿಸಲಾಗುತ್ತದೆಯೇ ಹೊರತು ಹೆದ್ದಾರಿ ಪ್ರಾಧಿಕಾರದ ತಪ್ಪು ಯಾರಿಗೂ ಕಾಣುತ್ತಿಲ್ಲ.

ಮಂಗಳೂರು ಮಹಾನಗರ ಪಾಲಿಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಈ ಕೆಳಗಿನ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು:
ನಂತೂರಿನಿಂದ ಬಿಕರ್ನಕಟ್ಟೆ ಫ್ಲೈ ಓವರ್ ವರೆಗಿನ ಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
ಫ್ಲೈ ಓವರ್ ಹಾಗೂ ರಸ್ತೆ ವಿಭಜಕಗಳಿಗೆ ತಕ್ಷಣವೇ ದಾರಿದೀಪಗಳನ್ನು ಅಳವಡಿಸಬೇಕು.
ಸೂಕ್ತ ಸೂಚನಾ ಫಲಕಗಳು, ಬಸ್ ತಂಗುದಾಣಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ರಸ್ತೆ ದಾಟಲು ಜೀಬ್ರಾ ಕ್ರಾಸ್ ನಿರ್ಮಿಸಬೇಕು.
ರಸ್ತೆ ಸುರಕ್ಷತೆಯ ದೃಷ್ಟಿಯಿಂದ ರಿಫ್ಲೆಕ್ಟರ್‌ಗಳು ಹಾಗೂ ಹೆದ್ದಾರಿ ಸೂಚನಾ ಬಣ್ಣಗಳನ್ನು ಹಚ್ಚಬೇಕು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಬಿಕರ್ನಕಟ್ಟೆಯ ಹೆಸರನ್ನು ಉಳಿಸಿ, ಸಾರ್ವಜನಿಕರ ಜೀವ ರಕ್ಷಣೆಗೆ ಮುಂದಾಗಬೇಕೆಂದು ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಮಾಧ್ಯಮಗಳ ಮೂಲಕ ಒತ್ತಾಯಿಸಿದ್ದಾರೆ.
