LATEST NEWS

ವಿಶೇಷ ಚೇತನರು ಮತ್ತು ಇತರ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತಂದ ‘ಅಲೋಯ್ ಕ್ವಿಜ್-ವಿಜ್ 2026’

ಮಂಗಳೂರು: ವಿಶೇಷ ಚೇತನ ಮಕ್ಕಳ ಸಾಮರ್ಥ್ಯವನ್ನು ಗುರುತಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಮಾನತೆ ಮತ್ತು ಸಹಕಾರದ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ‘ಅಲೋಯ್ ಕ್ವಿಜ್-ವಿಜ್ 2026’ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ ನಗರದ ಪಾಂಡೇಶ್ವರದ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿ ನಡೆಯಿತು.

ಸೈಂಟ್ ಅಲೋಶಿಯಸ್ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಅಂಗಸಂಸ್ಥೆಯಾದ ಸೈಂಟ್ ಅಲೋಶಿಯಸ್ ಹೈಯರ್ ಪ್ರೈಮರಿ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘವು ರೋಹನ್ ಕಾರ್ಪೊರೇಷನ್ ಸಹಯೋಗದಲ್ಲಿ ಈ ವಿಶಿಷ್ಟ ಸ್ಪರ್ಧೆಯನ್ನು ಆಯೋಜಿಸಿತ್ತು. ನಗರದ 16 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿ ತಂಡದಲ್ಲಿ ಐವರು ವಿದ್ಯಾರ್ಥಿಗಳಿದ್ದು, ಒಬ್ಬರು ದೃಷ್ಟಿದೋಷ ಹೊಂದಿರುವ ವಿದ್ಯಾರ್ಥಿ, ಒಬ್ಬರು ಮಾತು ಮತ್ತು ಶ್ರವಣ ದೋಷ ಹೊಂದಿರುವ ವಿದ್ಯಾರ್ಥಿ, ಒಬ್ಬರು ಸರ್ಕಾರಿ ಶಾಲೆಯ ವಿದ್ಯಾರ್ಥಿ ಹಾಗೂ ಇಬ್ಬರು ಖಾಸಗಿ ಶಾಲೆಯ ವಿದ್ಯಾರ್ಥಿಗಳಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯು.ಟಿ. ಖಾದರ್ ಮಾತನಾಡಿ, “ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ ಹಳೆ ವಿದ್ಯಾರ್ಥಿಗಳ ಸಂಘ ಅಭಿನಂದನಾರ್ಹ. ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ; ಮಕ್ಕಳನ್ನು ಒಂದೇ ವೇದಿಕೆಗೆ ತಂದ ಹಳೆ ವಿದ್ಯಾರ್ಥಿಗಳ ತಂಡವೇ ನಿಜವಾದ ವಿಜೇತರು” ಎಂದರು.

ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ. ಫಾ. ರೋನಿ ಪಾಯ್ಸ್ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ವಿಶಿಷ್ಟ ಪ್ರತಿಭೆ ಇರುತ್ತದೆ, ಅವುಗಳನ್ನು ಬೆಳೆಸಲು ಸಮಾನ ಅವಕಾಶ ಅಗತ್ಯ ಎಂದರು. ರೋಹನ್ ಕಾರ್ಪೊರೇಷನ್‌ನ ಡಿಯೋನ್ ಮಾಂಟೆರೊ, ಮೂಡಾ ಅಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು. ಮಂಗಳೂರು ಕ್ವಿಜ್ ಫೌಂಡೇಶನ್‌ನ ಡಾ. ಅಣ್ಣಪ್ಪ ಕಾಮತ್ ರಸಪ್ರಶ್ನೆ ನಡೆಸಿಕೊಟ್ಟರು.

ಸೈಂಟ್ ತೆರೇಸಾ ಐಸಿಎಸ್‌ಇ ಶಾಲೆ, ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ (ಶಕ್ತಿನಗರ) ಹಾಗೂ ಎಸ್‌ಡಿಎಂ ಮಂಗಳಜ್ಯೋತಿ ಇಂಟಿಗ್ರೇಟೆಡ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು. ಸೈಂಟ್ ಅಲೋಶಿಯಸ್ ಕಾಲೇಜು ಹೈಯರ್ ಪ್ರೈಮರಿ ಶಾಲೆ, ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಹೈಯರ್ ಪ್ರೈಮರಿ ಶಾಲೆ ಮತ್ತು ಎಸ್‌ಡಿಎಂ ಮಂಗಳಜ್ಯೋತಿ ಇಂಟಿಗ್ರೇಟೆಡ್ ಶಾಲೆಯ ತಂಡಗಳು ದ್ವಿತೀಯ ಸ್ಥಾನ ಪಡೆದವು. ಉತ್ತಮ ಸಹಕಾರ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ‘ಅತ್ಯುತ್ತಮ ತಂಡ ಸ್ಫೂರ್ತಿ’ ಪ್ರಶಸ್ತಿ ನೀಡಲಾಯಿತು.

Share News