ವಿಟ್ಲ,ಮಾಣಿಲ : ಬಂಟ್ವಾಳ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶರನ್ನವರಾತ್ರಿ ಉತ್ಸವಕ್ಕೆ ಭವ್ಯ ಚಾಲನೆ.

ಯೋಗಿಕೌಸ್ತುಭ, ಕರ್ಮಯೋಗಿ ‘ಸತ್ಕರ್ಮ ತಪಸ್ವಿ’ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಹಾಗೂ ವೇದಮೂರ್ತಿ ಗಣಪತಿ ಭಟ್ ಬಾಕಿಲಪದವು ಇವರ ವೈದಿಕತ್ವದಲ್ಲಿ ನವರಾತ್ರಿಯ ಮೊದಲ ದಿನದ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡವು.

ಶಾಸ್ತ್ರೋಕ್ತವಾಗಿ ನೆರವೇರಿದ ಕೊಪ್ಪರಿಗೆ ಮುಹೂರ್ತ
ಉತ್ಸವದ ಆರಂಭದ ದಿನವಾದ ಇಂದು ಪ್ರಾತಃಕಾಲ 5:30ಕ್ಕೆ ದ್ವಾದಶ ನಾಳಿಕೇರ ಅಷ್ಟದ್ರವ್ಯ ಮಹಾಗಣಹೋಮ ಜರುಗಿತು. ತದನಂತರ ಭಕ್ತಸಮೂಹದ ಸಮ್ಮುಖದಲ್ಲಿ ಬೆಳಿಗ್ಗೆ 8:00 ಗಂಟೆಗೆ ಉತ್ಸವದ ಶುಭ ಸೂಚಕವಾದ ಕೊಪ್ಪರಿಗೆ ಮುಹೂರ್ತವು ಶಾಸ್ತ್ರೋಕ್ತವಾಗಿ ನೆರವೇರಿತು. ನವರಾತ್ರಿ ನಿಮಿತ್ತ ದೇವಿಗೆ ಪಂಚಾಮೃತಾಭಿಷೇಕ, ಕುಂಭೇಶ್ವರೀ ಪೂಜೆ ಹಾಗೂ ಗುರುಪೂಜೆಗಳು ಜರುಗಿದವು.

ದೇವಿಗೆ ಸಾಮೂಹಿಕ ಕುಂಕುಮಾರ್ಚನೆ, ಪೂರ್ಣಾಹುತಿ
ಬೆಳಿಗ್ಗೆಯಿಂದ ಆರಂಭಗೊಂಡ ಮಹಾಚಂಡಿಕಾಯಾಗದ ಪೂರ್ಣಾಹುತಿಯು 11:45ಕ್ಕೆ ನೆರವೇರಿತು. ಇದಕ್ಕೂ ಮುನ್ನ ಕ್ಷೇತ್ರದ ಸುಖ-ಶಾಂತಿಗಾಗಿ ನೂರಾರು ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ಜರುಗಿತು. ಮಧ್ಯಾಹ್ನ 12:30ಕ್ಕೆ ದೇವಿಗೆ ಮಹಾಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಮಾಡಲಾಯಿತು. ಕ್ಷೇತ್ರಕ್ಕೆ ಹರಿದುಬಂದ ಸಾವಿರಾರು ಭಕ್ತಾದಿಗಳಿಗೆ ಮಹಾಅನ್ನಸಂತರ್ಪಣೆ ನೆರವೇರಿತು.

ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು
ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಮಧ್ಯಾಹ್ನ 2:00 ಗಂಟೆಯಿಂದ ಸಾಂಸ್ಕೃತಿಕ ವೈಭವ ಆರಂಭ ಗೊಂಡಿತು. ವಿದುಷಿ ಶ್ರೀಮತಿ ಉಮಾ ವಿಷ್ಣು ಹೆಬ್ಬಾರ್ ನೇತೃತ್ವದ ಭಾರತಿ ನೃತ್ಯಾಲಯ ಮುಡಿಪು ಇದರ ವಿದ್ಯಾರ್ಥಿಗಳಿಂದ ನಡೆದ “ನೃತ್ಯ ಸಿಂಚನ” భರತನಾಟ್ಯ ಪ್ರದರ್ಶನವು ಕಲಾಪ್ರೇಮಿಗಳ ಮನಗೆದ್ದಿತು. ವಿವಿಧ ಭಜನಾ ಮಂಡಳಿಗಳ ಸಹಭಾಗಿತ್ವದಲ್ಲಿ ದಿನವಿಡೀ ನಡೆದ ಭಜನಾ ಸಂಕೀರ್ತನೆಯು ಭಕ್ತಿಭಾವದ ವಾತಾವರಣ ನಿರ್ಮಿಸಿತು.

ಸಂಜೆ 5:30 ರಿಂದ ದೀಪಾರಾಧನೆ, ಭವ್ಯ ದುರ್ಗಾನಮಸ್ಕಾರ ಪೂಜೆ,
ಲಲಿತಾಸಹಸ್ರನಾಮಾರ್ಚನೆ ಹಾಗೂ ಅಷ್ಟಾವದಾನ ಸೇವೆಗಳು ಕಂಗೊಳಿಸಿದವು. ರಾತ್ರಿ ಮಹಾಪೂಜೆ ಮತ್ತು ಪ್ರಸಾದ ವಿತರಣೆಯೊಂದಿಗೆ ಪ್ರಥಮ ದಿನದ ಧಾರ್ಮಿಕ ವಿಧಿಗಳು ಮುಕ್ತಾಯಗೊಂಡವು.

ಅಕ್ಟೋಬರ್ 23ರ ತನಕ ನಿರಂತರ ಉತ್ಸವ
ಭವ್ಯ ಶರನ್ನವರಾತ್ರಿ ಉತ್ಸವವು ಅಕ್ಟೋಬರ್ 23ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಿರಂತರವಾಗಿ ಜರಗಲಿದೆ. ನಾಡಿನ ಭಗವದ್ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕ್ಷೇತ್ರದ ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
