LATEST NEWS

ಶ್ರೀ ಮಂಗಳಾದೇವಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ, ಸಾಂಸ್ಕೃತಿಕ ಉತ್ಸವಕ್ಕೆ ಭವ್ಯ ಚಾಲನೆ

ಮಂಗಳೂರು: ಲೋಕ ಪ್ರಸಿದ್ಧ “ಶ್ರೀ ಮಂಗಳಾದೇವಿಯ ಮಂಗಳೂರು ದಸರಾ” ಶರನ್ನವರಾತ್ರಿ ಮಹೋತ್ಸವಕ್ಕೆ ಆಶ್ವಯುಜ ಶುಕ್ಲ ಪಾಡ್ಯದ ಶುಭ ದಿನವಾದ ಭಾನುವಾರ ಭವ್ಯ ಹಾಗೂ ಶ್ರದ್ಧಾಭಕ್ತಿಯ ಚಾಲನೆ ದೊರೆತಿದೆ. ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಹಾಗೂ ಮಹಾತಾಯಿಯ ಸನ್ನಿಧಾನದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಕೊಪ್ಪರಿಗೆ ಮುಹೂರ್ತವನ್ನಿಟ್ಟು ನವರಾತ್ರಿ ಉತ್ಸವವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.ಶ್ರೀ ಕ್ಷೇತ್ರದ ತಂತ್ರಿಗಳಾದ ಪರಮಪೂಜ್ಯ ವೇದಮೂರ್ತಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಶ್ರೀ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿವರೇಣ್ಯರ ಅಮೃತ ಹಸ್ತಗಳಿಂದ ಉತ್ಸವವು ಚಾಲನೆಗೊಂಡಿತು. ರಾಜ ಗರ್ಭಗೃಹದಲ್ಲಿ ಬಿಂಬ ರೂಪದಲ್ಲಿ ಸುಪ್ರಸನ್ನಳಾದ ಸರ್ವಾಭಿಷ್ಠ ಪ್ರದಾಯಿನಿ ಶ್ರೀ ಮಂಗಳಾದೇವಿಯ ಚರಣಾರವಿಂದಗಳಲ್ಲಿ ಶರನ್ನವರಾತ್ರಿ ಪರ್ವಕಾಲದ ಶುಭಾರಂಭಕ್ಕಾಗಿ ಭಕ್ತಿಪೂರ್ವಕವಾಗಿ ಪ್ರಾರ್ಥನೆಗೈದು ಮಹಾಮಂಗಳಾರತಿ ನೆರವೇರಿಸಲಾಯಿತು. ನವರಾತ್ರಿಯ ಪ್ರಥಮ ದಿನದ ಅಂಗವಾಗಿ ಶ್ರೀ ದೇವಿಯು ದುರ್ಗಾ ಸ್ವರೂಪಳಾಗಿ ಸಿಂಹಾರೋಹಣಗೈದು ಭಕ್ತ ಜನಕೋಟಿಗೆ ದರ್ಶನ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರೂ ಹಾಗೂ ಅರ್ಚಕರಾದ ಶ್ರೀ ಎಂ. ಅರುಣ್ ಐತಾಳರು, ಅನುವಂಶಿಕ ಮೊಕ್ತೇಸರರಾದ ಜಿ. ರಘುರಾಮ ಉಪಾಧ್ಯಾಯರು, ಎಸ್. ಹರೀಶ್ ಐತಾಳರು, ಹಿರಿಯ ಪರ್ಯಾಯ ಪ್ರಧಾನ ಅರ್ಚಕರಾದ ಶ್ರೀ ಶ್ರೀನಿವಾಸ ಐತಾಳರು ಹಾಗೂ ಸರ್ವ ಅರ್ಚಕವೃಂದ, ಸಿಬ್ಬಂದಿವರ್ಗ ಮತ್ತು ಸಹಸ್ರಾರು ಕ್ಷೇತ್ರಾಭಿಮಾನಿ ಭಕ್ತಬಂಧುಗಳು ಉಪಸ್ಥಿತರಿದ್ದರು.ಸಾಂಸ್ಕೃತಿಕ ಉತ್ಸವಕ್ಕೆ ಕರ್ನಾಟಕ ಬ್ಯಾಂಕ್ ಸಿಜಿಎಂ ಚಾಲನೆ:ಧಾರ್ಮಿಕ ವಿಧಿವಿಧಾನಗಳ ಜೊತೆಗೆ ಕ್ಷೇತ್ರದ ದಸರಾ ಸಾಂಸ್ಕೃತಿಕ ಉತ್ಸವಕ್ಕೂ ಚಾಲನೆ ನೀಡಲಾಯಿತು. ಕರ್ನಾಟಕ ಬ್ಯಾಂಕಿನ ಚೀಫ್ ಜನರಲ್ ಮ್ಯಾನೇಜರ್ (CGM) ಆಗಿರುವ ಶ್ರೀ ಲಕ್ಷ್ಮೀನಾರಾಯಣ ಪಿ.ಎಸ್. ರವರು ಜ್ಯೋತಿ ಬೆಳಗಿಸುವುದರ ಮುಖೇನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, “ಉತ್ತಮ ಮೌಲ್ಯಧಾರಿತ ಧಾರ್ಮಿಕತೆಯ ವಿಚಾರಧಾರೆಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದೇವಳಗಳು ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಈ ನಿಟ್ಟಿನಲ್ಲಿ ಮಂಗಳಾದೇವಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಉತ್ಸವದ 12 ದಿನಗಳಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೌಲ್ಯಾಧಾರಿತ ಚಿಂತನೆಗಳನ್ನು ಭಕ್ತ ಜನರಿಗೆ ನೀಡುತ್ತಿರುವುದು ಅಭಿನಂದನೀಯ,” ಎಂದು ನುಡಿದರು.ವೇದಿಕೆಯಲ್ಲಿ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಅರುಣ್ ಐತಾಳ್, ಶ್ರೀ ಹರೀಶ್ ಐತಾಳ್ ಹಾಗೂ ಶ್ರೀ ರಘುರಾಮ ಉಪಾಧ್ಯಾಯ ಉಪಸ್ಥಿತರಿದ್ದರು. ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ ಶುಭ ಹಾರೈಸಿದರು. ಮಲ್ಲಿಕಾ ಕಲಾವೃಂದದ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ ಪೇಜಾವರ ಪ್ರಸ್ತಾವನೆಗೈದರು. ಸಾಂಸ್ಕೃತಿಕ ಕಾರ್ಯಕ್ರಮದ ಸಂಘಟಕರಾದ ಶ್ರೀ ವಿನಯಾನಂದ ಕಾನಡ್ಕರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮಕ್ಕೆ ವಾಸುದೇವ ಕುಡುಪು ಸಹಕರಿಸಿದ್ದರು.ಶ್ರೀ ಮಂಗಳಾದೇವಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಉತ್ಸವದ ಎಲ್ಲಾ ದಿನಗಳಲ್ಲಿ ನಿರಂತರವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಡಗರದಿಂದ ನೆರವೇರಲಿವೆ ಎಂದು ಪ್ರಕಟಣೆ ತಿಳಿಸಿದೆ.

Share News