COMMUNITY NEWSLATEST NEWS

ಮಂಗಳೂರು: ಪಾಲ್ದನೆ ಸಂತ ಮದರ್ ತೆರೆಸಾ ಚರ್ಚ್‌ನಲ್ಲಿ ವಾರ್ಷಿಕೋತ್ಸವ ಸಂಭ್ರಮ; ಮೌಲ್ಯಾಧಾರಿತ ಜೀವನಕ್ಕೆ ವಂ| ಡೆನ್ನಿಸ್ ಡೇಸಾ ಕರೆ

ಮಂಗಳೂರು: ಮಂಗಳೂರಿನ ಪಾಲ್ದನೆಯ ಸಂತ ಮದರ್ ತೆರೆಸಾ ಚರ್ಚ್‌ನ ವಾರ್ಷಿಕ ಮಹೋತ್ಸವವು ಅಕ್ಟೋಬರ್ 11ರ ಭಾನುವಾರದಂದು ಅತ್ಯಂತ ಭಕ್ತಿ ಶ್ರದ್ಧೆ ಹಾಗೂ ವಿಜೃಂಭಣೆಯಿಂದ ಜರುಗಿತು.

ಹಬ್ಬದ ಸಾಂಭ್ರಮಿಕ ಜಂಟಿ ಬಲಿಪೂಜೆಯ ಮುಖ್ಯ ಹಸ್ತಿಕರಾಗಿ ಉಡುಪಿ ಧರ್ಮಪ್ರಾಂತ್ಯದ ಮುದರಂಗಡಿ ‘ಮದರ್ ಆಫ್ ಚರ್ಚ್’ನ ಪ್ರಧಾನ ಧರ್ಮಗುರು ಗಳಾದ ವಂದನೀಯ ಡೆನ್ನಿಸ್ ಅಲೆಕ್ಸಾಂಡರ್ ಡೇಸಾ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರವಚನ ನೀಡಿದ ಅವರು, “ಚರ್ಚ್‌ನ ಪೋಷಕಿಯಾದ ಸಂತ ಮದರ್ ತೆರೆಸಾ ಅವರ ಮೌಲ್ಯಾಧಾರಿತ ಜೀವನ ನಮಗೆಲ್ಲರಿಗೂ ಮಾದರಿಯಾಗಿದೆ. ಪ್ರತಿಯೊಬ್ಬ ಭಕ್ತರು ಕೂಡ ತಮ್ಮ ದೈನಂದಿನ ಬದುಕಿನಲ್ಲಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

“ಬಡಬಗ್ಗರ, ರೋಗಿಗಳ ಮತ್ತು ನಿರ್ಗತಿಕರ ಸೇವೆಯಲ್ಲೇ ದೇವರನ್ನು ಕಂಡವರು ಸಂತ ಮದರ್ ತೆರೆಸಾ. ಅಂತಹ ಮಹಾನ್ ಪೋಷಕಿಯನ್ನು ಪಡೆದ ಪಾಲ್ದನೆ ಚರ್ಚ್‌ನ ಭಕ್ತರು ನಿಜಕ್ಕೂ ಧನ್ಯರು. ನಾವೆಲ್ಲರೂ ಭಗವಂತನಿಗೆ ಧನ್ಯವಾದ ಸಮರ್ಪಿಸಿ, ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಅಸಹಾಯಕರಿಗೆ ಸಹಾಯಹಸ್ತ ಚಾಚಿದಾಗ ಮಾತ್ರ ನಾವು ಸಲ್ಲಿಸುವ ನಿಜವಾದ ಪ್ರಾರ್ಥನೆ ಮತ್ತು ಸೇವೆಗೆ ದೈವಿಕ ಆಶೀರ್ವಾದ ಸಿಗುತ್ತದೆ. ನಮ್ಮ ಕೈಲಾದ ಮಟ್ಟಿಗೆ ಹಸಿದವರಿಗೆ, ರೋಗಿಗಳಿಗೆ ಸೇವೆ ಸಲ್ಲಿಸಿ ನಮ್ಮ ಜೀವನವನ್ನು ಸಾರ್ಥಕಗೊಳಿಸೋಣ” ಎಂದು ಅವರು ಮಾರ್ಮಿಕವಾಗಿ ನುಡಿದರು.

ಪವಿತ್ರ ಬಲಿಪೂಜೆಯಲ್ಲಿ ವಂದನೀಯ ಗುರುಗಳಾದ ಫಾ. ಮೆಲ್ವಿನ್ ಡಿ’ಕುನ್ಹಾ, ಫಾ. ರೋವಿನ್ ಲೋಪೆಜ್, ಫಾ. ಸಂತೋಷ್ ರೊಡ್ರಿಗಸ್, ಫಾ. ರೋಕಿ ಡಿ’ಕುನ್ಹಾ, ಫಾ. ಪೌಲ್ ಪಿಂಟೋ ಹಾಗೂ ವಂ| ಜೋಸೆಫ್ ಕುವೆಲ್ಲೊ ಸೇರಿದಂತೆ ಹಲವು ಧರ್ಮಗುರುಗಳು ಸಹ-ಬಲಿಪೂಜೆ ನೆರವೇರಿಸಿದರು.

ಪಾಲ್ದನೆ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಬಲಿಪೂಜೆಯಲ್ಲಿ ಪಾಲ್ಗೊಂಡು, ವಾರ್ಷಿಕ ಮಹೋತ್ಸವದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಭಕ್ತಾದಿಗಳಿಗೆ, ದಾನಿಗಳಿಗೆ ಮತ್ತು ಪದಾಧಿಕಾರಿಗಳಿಗೆ ಹೃದಯಸ್ಪರ್ಶಿ ಕೃತಜ್ಞತೆಗಳನ್ನು ಸಲ್ಲಿಸಿದರು.

ಗಣ್ಯರಿಗೆ ಗೌರವ ಸಮರ್ಪಣೆ:

ಇದೇ ಸಂದರ್ಭದಲ್ಲಿ ಹಬ್ಬದ ಪ್ರಮುಖ ಪೋಷಕರಾದ (ಪಿರ್ಜೆಂತ್) ಮೇಲ್ವಿನ್ ಡಿಸೋಜಾ, ರೀಮಾ ಡಿಸೋಜಾ, ಒಲ್ವಿಯಾ ಡಿಸೋಜಾ ಮತ್ತು ಮೇಲ್ರೋಯ್ ಡಿಸೋಜಾ ಕುಟುಂಬಸ್ಥರನ್ನು ಚರ್ಚ್ ವತಿಯಿಂದ ಸಾಂಪ್ರದಾಯಿಕವಾಗಿ ಗೌರವಿಸಲಾಯಿತು. ವೇದಿಕೆಯಲ್ಲಿ ಚರ್ಚ್ ಪಾಲನಾ ಪರಿಷತ್ತಿನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ರೋಶನ್ ಮೊಂತೇರೊ, ಆಧ್ಯಾತ್ಮಿಕ ಸಂಚಾಲಕ ವಿಲಿಯಂ ಲೋಬೊ ಹಾಗೂ ಗಾಯನ ಮಂಡಳಿಯ ಅಧ್ಯಕ್ಷೆ ಲಿಝಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಹಬ್ಬದ ಅಂಗವಾಗಿ ಚರ್ಚ್‌ನ ಐಸಿವೈಎಂ (ICYM) ಯುವಜನ ಸಂಘಟನೆಯ ವತಿಯಿಂದ ಸಾರ್ವಜನಿಕರಿಗಾಗಿ ವಿವಿಧ ಮನರಂಜನಾತ್ಮಕ ಹಾಗೂ ಆಹಾರದ ಸ್ಟಾಲ್‌ಗಳನ್ನು ಆಯೋಜಿಸಲಾಗಿದ್ದು, ಭಕ್ತರ ಆಕರ್ಷಣೆಗೆ ಪಾತ್ರವಾಯಿತು. ಇಡೀ ಚರ್ಚ್ ಆವರಣದಲ್ಲಿ ಹಬ್ಬದ ಸಡಗರ ಮನೆಮಾಡಿತ್ತು.

Share News