LATEST NEWS

ಶ್ರೀ ಮಂಗಳಾದೇವಿ ಸನ್ನಿಧಿಯಲ್ಲಿ ನವರಾತ್ರಿ ನವ ವೈಭವ: ಅಕ್ಟೋಬರ್ 11 ರಿಂದ ಉತ್ಸವ ಆರಂಭ

ಮಂಗಳೂರು:ಮಂಗಳೂರಿನ ಇತಿಹಾಸದಲ್ಲೇ ಧ್ರುವತಾರೆಯಾಗಿ ಖ್ಯಾತಿ ಗಳಿಸಿರುವ, ನಗರದ ಹೆಸರಿಗೆ ಕಾರಣವಾಗಿರುವ ಪರಮ ಪವಿತ್ರ ಕ್ಷೇತ್ರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸ್ವಸ್ತಿ ಶ್ರೀ ಪರಾಭವ ನಾಮ ಸಂವತ್ಸರದ ಆಶ್ವಿಜ ಶುದ್ಧ ಪ್ರತಿಪದೆಯಿಂದ ಅಕ್ಟೋಬರ್ 11ರ ರವಿವಾರ ಅಕ್ಟೋಬರ್ 22ರ ಗುರುವಾರದವರೆಗೆ ನವರಾತ್ರಿ ಉತ್ಸವವು ಅತ್ಯಂತ ವೈಭವ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಲಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಎಂ. ಅರುಣ್ ಐತಾಳ್ ತಿಳಿಸಿದ್ದಾರೆ.

ಕ್ಷೇತ್ರದ ಪೌರಾಣಿಕ ಹಿನ್ನೆಲೆ ಮತ್ತು ವಿಶೇಷತೆ:

ಸಪ್ತಋಷಿಗಳ ಶಾಪದಿಂದ ಭೂಮಿಯಲ್ಲಿ ಜನಿಸಿದ ಹಿರಾಣಾಕ್ಷ-ಹಿರಣ್ಯಕಶಿಪುವಿನ ನಿಗ್ರಹದ ನಂತರ, ಹಿರಣ್ಯಾಕ್ಷನ ಮಗಳಾದ ವಿಖಾಸಿನಿಯು ಶಿವನಿಂದ ಪಡೆದ ವರದ ಪೌರಾಣಿಕ ಹಿನ್ನೆಲೆಯನ್ನು ಈ ಕ್ಷೇತ್ರ ಹೊಂದಿದೆ. ದೆಹಲಿಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ಮೇಲ್ವಿಚಾರಣೆಗೆ ಒಳಪಟ್ಟಿರುವ ಈ ದೇವಸ್ಥಾನದಲ್ಲಿ ಪುರಾತನ ಕಾಲದ ಬಿಂಬರೂಪದ ಶಿವಶಕ್ತಿ ಲಿಂಗವಿದ್ದು, ಲಿಂಗದ ಮೇಲ್ಭಾಗದಲ್ಲಿ ಧಾರಾಪಾತ್ರೆ ಇರುವುದು ಇಲ್ಲಿನ ಜಗತ್ಪ್ರಸಿದ್ಧ ವಿಶೇಷತೆಯಾಗಿದೆ.

ಕಂಕಣ ಬಲ ನೀಡುವ ಸ್ವಯಂವರ ಪಾರ್ವತಿ ವ್ರತ:

ಯಾವ ಕನ್ಯೆಯರಿಗೆ ವಿವಾಹ ಯೋಗ ಕೂಡಿಬರುತ್ತಿಲ್ಲವೋ, ಅವರು ಇಲ್ಲಿ ವ್ರತದಲ್ಲಿದ್ದು ದೇವಿಯ ಸನ್ನಿಧಿಯಲ್ಲಿ “ಸ್ವಯಂವರ ಪಾರ್ವತಿ” ಪೂಜೆ ಆಚರಿಸಿದರೆ ಶೀಘ್ರ ಕಂಕಣ ಬಲ ಕೂಡಿಬರುತ್ತದೆ ಎಂಬ ದೃಢ ನಂಬಿಕೆಯಿದೆ. ನವರಾತ್ರಿಯ ದಿನಗಳಲ್ಲಿ ಪ್ರತೀ ರಾತ್ರಿ ಮಹಾಪೂಜೆಯ ಸಂದರ್ಭದಲ್ಲಿ ಈ ವಿಶೇಷ ಪೂಜೆ ನಡೆಯಲಿದೆ.

ನವರಾತ್ರಿ ಉತ್ಸವದ ಪ್ರಮುಖ ಆಚರಣೆಗಳು:

• ಅಕ್ಟೋಬರ್ 11 (ರವಿವಾರ): ಕೊಪ್ಪರಿಗೆ ಏರಿಸುವುದರೊಂದಿಗೆ ನವರಾತ್ರಿ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದ್ದು, ಮುಂದಿನ ಹತ್ತು ದಿನಗಳ ಕಾಲ ದೇವಿಗೆ ನವವಿಧ ಅಲಂಕಾರಗಳೊಂದಿಗೆ ಕಲ್ಲೋಕ್ತ ಪೂಜೆಗಳು ನಡೆಯಲಿವೆ.

• ಮಹಾನವಮಿ: ಈ ದಿನ ದೇವಸ್ಥಾನದಲ್ಲಿ ಚಂಡಿಕಾ ಹೋಮ, ರಂಗಪೂಜೆ ಹಾಗೂ ಸಣ್ಣ ರಥೋತ್ಸವ ಜರಗಲಿದೆ.

• ವಿಜಯದಶಮಿ: ಪ್ರಾತಃಕಾಲದಲ್ಲಿ ಭಕ್ತಾದಿಗಳಿಗೆ “ತೆನೆ ತೆರುವ ಉತ್ಸವ” (ಹೊಸ ಅಕ್ಕಿ ಊಟದ ತೆನೆ) ನಡೆಯಲಿದ್ದು, ಸನ್ನಿಧಿಯಲ್ಲಿ ಸಣ್ಣ ಮಕ್ಕಳಿಗೆ ವಿದ್ಯಾರಂಭ ಮಾಡಿಸಲಾಗುವುದು. ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶಮೀಕಟ್ಟೆಯವರೆಗೆ ಭವ್ಯ ರಥೋತ್ಸವ ಜರಗಲಿದೆ.

• ಅವಭೃತ ಸ್ನಾನ (ವಿಜಯದಶಮಿಯ ಮರುದಿನ): ಸಾಯಂಕಾಲ ಉತ್ಸವ ಮೂರ್ತಿಯನ್ನು ನೇತ್ರವತಿ ಮತ್ತು ಫಲ್ಗುಣಿ ನದಿಗಳ ಸಂಗಮ ಸ್ಥಳವಾದ ಉಪ್ಪಿನ ಕೋಟೆಗೆ ಕೊಂಡೊಯ್ದು ಪವಿತ್ರ ಅವಭೃತ ಸ್ನಾನ ನೆರವೇರಿಸಿ, ಮರಳಿ ತಂದು ಮಹಾಪೂಜೆ ನೆರವೇರಿಸಲಾಗುವುದು.

ಸಾರ್ವಜನಿಕ ಅನ್ನಸಂತರ್ಪಣೆ:

ಉತ್ಸವದ 12 ದಿನಗಳ ಕಾಲ ಭಕ್ತಾದಿಗಳಿಗೆ ಪ್ರತಿದಿನ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿದೆ. ದೇವಸ್ಥಾನದ ಅನುವಂಶಿಕ ಟ್ರಸ್ಟಿಗಳಾದ ಜಿ. ರಘುರಾಮ ಉಪಾಧ್ಯಾಯ, ಎಸ್. ಹರೀಶ್ ಐತಾಳ್ ಹಾಗೂ ಪ್ರಧಾನ ಅರ್ಚಕರಾದ ಶ್ರೀ ಬಿ. ಶ್ರೀನಿವಾಸ್ ಐತಾಳ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಡಿನ ಸಮಸ್ತ ಭಕ್ತಾದಿಗಳು ಈ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ಮಂಗಳಾದೇವಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ವಿನಂತಿಸಿದೆ.

Share News