LATEST NEWS

ಪ್ರಧಾನಿ ಮೋದಿ 25 ವರ್ಷಗಳ ಜನಸೇವೆ ಪ್ರಯುಕ್ತ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು: ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ 25 ವರ್ಷದ ಸಾರ್ಥಕ ಜನಸೇವೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಪ್ರಯುಕ್ತ ನಗರದ ಸೆಂಟ್ರಲ್ ವಾರ್ಡಿನ ಸೆಂಟ್ರಲ್ ಮಾರ್ಕೆಟ್ ಕಟ್ಟಡದಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಕಾರ್ಯದರ್ಶಿ ಹಾಗೂ ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಪೂರ್ಣಿಮಾ ರವರ ನೇತೃತ್ವದಲ್ಲಿ ಈ ಯಶಸ್ವಿ ಶಿಬಿರ ಜರುಗಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ಅವರು, “ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಮಾಡಿರುವ ಸಾಧನೆಗಳು ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಜೀವಾಳ ಮತ್ತು ಮಾದರಿಯಾಗಿದೆ. ಒಬ್ಬ ಜನಸೇವಕ ಪ್ರಾಮಾಣಿಕ ನಾಗಿದ್ದಾಗ ದೇಶದ ಜನತೆ ಹೇಗೆ ಬೆಂಬಲ ನೀಡುತ್ತಾರೆ ಎಂಬುದಕ್ಕೆ ಅವರ ಯಶಸ್ವಿ ಆಡಳಿತವೇ ಸಾಕ್ಷಿ” ಎಂದು ಶ್ಲಾಘಿಸಿದರು.

ಬಳಿಕ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಅವರು, “ಮಾನ್ಯ ಪ್ರಧಾನಿಗಳ 25 ವರ್ಷಗಳ ಸಾರ್ವಜನಿಕ ಸೇವೆ ಮತ್ತು ದೇಶದ ಏಳಿಗೆಗಾಗಿ ಅವರು ಪಟ್ಟಿರುವ ಶ್ರಮಕ್ಕೆ ಸಾಟಿಯಿಲ್ಲ. ಪ್ರಧಾನಿಯವರು ದೇಶವಾಸಿಗಳಿಗೆ ನೀಡಿರುವ ಕರೆಯಂತೆ, ನಾವೆಲ್ಲರೂ ಒಗ್ಗೂಡಿ ‘ವಿಕಸಿತ ಭಾರತ’ದ ನಿರ್ಮಾಣಕ್ಕಾಗಿ ಧೃಡ ಸಂಕಲ್ಪ ಕೈಗೊಳ್ಳೋಣ” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಕಾರ್ಯಕ್ರಮದ ಜಿಲ್ಲಾ ಪ್ರಭಾರಿ ಯತೀಶ್ ಆರ್ವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲದ ಪ್ರಧಾನ ಕಾರ್ಯದರ್ಶಿ ಲಲ್ಲೇಶ್ ಹಾಗೂ ರಮೇಶ್ ಹೆಗ್ಡೆ, ಶಕ್ತಿಕೇಂದ್ರ ಅಧ್ಯಕ್ಷ ಮುರಳಿಧರ್ ನಾಯಕ್, ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್, ವಕ್ತಾರ ಜೀವನ್ ಉಪಸ್ಥಿತರಿದ್ದರು.

ಪ್ರಮುಖರಾದ ಗುರುಚರಣ್, ಪ್ರಮೋದ್ ಆಚಾರ್ಯ, ಪಿ.ಸಿ ಗುರು, ಗಿರೀಶ್ ಪೈ, ಕೃಷ್ಣಾನಂದ ಪೈ, ಪ್ರವೀಣ್ ನಿಡ್ಡೆಲ್, ಎಂ.ಪಿ ಗಣೇಶ್, ಸೆಂಟ್ರಲ್ ಮಾರ್ಕೆಟ್ ಕಟ್ಟಡದ ಮೇಲ್ವಿಚಾರಕರಾದ ಪೃಥ್ವಿರಾಜ್, ಶಿಬಿರದ ನೇತೃತ್ವ ವಹಿಸಿದ್ದ ಡಾಕ್ಟರ್ ಸೌಭಾಗ್ಯ ಹಾಗೂ ಪಕ್ಷದ ಇತರೆ ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಮಿಕರ ಆರೋಗ್ಯ ಹಿತದೃಷ್ಟಿಯಿಂದ ಹಮ್ಮಿಕೊಂಡಿದ್ದ ಈ ಶಿಬಿರವನ್ನು ಯಶಸ್ವಿಗೊಳಿಸಿದರು.

Share News