ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿಷ್ಠಿತ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ಹಾಗೂ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ–2027’ ಈ ಬಾರಿ ಜಂಟಿಯಾಗಿ ನಡೆಯಲಿದ್ದು, ಜನವರಿ 6ರಿಂದ 10ರವರೆಗೆ ಐದು ದಿನಗಳ ಕಾಲ ಮೂಡುಬಿದಿರೆಯಲ್ಲಿ ಆಯೋಜಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಹತ್ವದ ಮಾಹಿತಿ ನೀಡಿದರು.

ಕನ್ನಡ ನಾಡು–ನುಡಿ–ಸಂಸ್ಕೃತಿಯ ಈ ರಾಷ್ಟ್ರೀಯ ಸಮ್ಮೇಳನವು ಜನವರಿ 7ರಂದು ಉದ್ಘಾಟನೆ ಗೊಂಡು, ಜನವರಿ 9ರಂದು ಸಮಾಪನಗೊಳ್ಳಲಿದೆ. ಈ ಬಾರಿಯ ನುಡಿಸಿರಿಯು ‘ಕನ್ನಡ ಮನಸ್ಸು : ಭವಿಷ್ಯದ ಕನಸು’ ಎಂಬ ಮುಖ್ಯ ಪರಿಕಲ್ಪನೆಯನ್ನು ಹೊಂದಿದ್ದು, ಯುವಜನರನ್ನು ಕೇಂದ್ರವಾಗಿರಿಸಿ ಕೊಂಡು ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನದ ಸಮರ್ಪಕ ಬಳಕೆಯೊಂದಿಗೆ ಕನ್ನಡದ ಅಸ್ಮಿತೆಯನ್ನು ಉಳಿಸಿ, ಭವಿಷ್ಯದ ಕರ್ನಾಟಕ ಕಟ್ಟುವ ಆಶಯ ಹೊಂದಿದೆ ಎಂದು ಅವರು ವಿವರಿಸಿದರು.

ಗಣ್ಯರ ಸಾರಥ್ಯ:
ಖ್ಯಾತ ಕನ್ನಡ ವಿಮರ್ಶಕ ಹಾಗೂ ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಆಳ್ವಾಸ್ ನುಡಿಸಿರಿ–2027ರ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತ, ಅಂಕಣಕಾರ ಹಾಗೂ ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ ಅವರು ಸಮ್ಮೇಳನದ ಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದಾರೆ.

ಅದ್ದೂರಿ ಆಳ್ವಾಸ್ ವಿರಾಸತ್ ಚಾಲನೆ:
ಜನವರಿ 6ರಂದು ಆಳ್ವಾಸ್ ವಿರಾಸತ್‌ಗೆ ಭವ್ಯ ಚಾಲನೆ ದೊರೆಯಲಿದ್ದು, ವೇದಘೋಷ, ಭಜನೆ, ಪುಷ್ಪಪಲ್ಲಕ್ಕಿ ಹಾಗೂ ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥದ ಮೆರವಣಿಗೆ ನಡೆಯಲಿದೆ. ಹರಿದ್ವಾರದ ಗಂಗಾರತಿ ತಂಡದಿಂದ ವಿಶೇಷ ಗಂಗಾರತಿ ನೆರವೇರಲಿದೆ. ಶಾಸ್ತ್ರೀಯ ಹಾಗೂ ಜನಪದ ಕ್ಷೇತ್ರದ ಇಬ್ಬರು ಸಾಧಕರಿಗೆ ‘ಆಳ್ವಾಸ್ ವಿರಾಸತ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಜನವರಿ 6ರಿಂದ ಪ್ರತಿದಿನ ಸಂಜೆ 6ರಿಂದ ರಾತ್ರಿ 10ರವರೆಗೆ ದೇಶ-ವಿದೇಶಗಳ ಪ್ರಸಿದ್ಧ ಕಲಾವಿದರಿಂದ ಸಂಗೀತ, ನೃತ್ಯ, ಶಾಸ್ತ್ರೀಯ ಹಾಗೂ ಜಾನಪದ ಕಲಾ ಕಾರ್ಯಕ್ರಮಗಳು ಜರುಗಲಿವೆ.
ಹಸಿರು ಸಂವಾದ ಮತ್ತು ಯುವಜನೋತ್ಸವ:
ಮಹೋತ್ಸವದ ಅಂಗವಾಗಿ ಜನವರಿ 6 ಮತ್ತು 7ರಂದು ‘ಹಸಿರು ಸಂವಾದ’ ರಾಷ್ಟ್ರೀಯ ಮಟ್ಟದ ಸಮ್ಮೇಳನ ನಡೆಯಲಿದ್ದು, ಕರಾವಳಿ ಪರಿಸರ ಸಂರಕ್ಷಣೆ ಮತ್ತು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಕುರಿತು 800ಕ್ಕೂ ಅಧಿಕ ತಜ್ಞರು ಚರ್ಚಿಸಲಿದ್ದಾರೆ. ರಾಜ್ಯಮಟ್ಟದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಾಂಸ್ಕೃತಿಕ ಜಂಬೂರಿಯಲ್ಲಿ 5,000ಕ್ಕೂ ಅಧಿಕ ಸೈಟ್ಸ್, ಗೈಡ್ಸ್, ರೋವರ್ಸ್ ಹಾಗೂ ರೇಂಜರ್ಸ್ ಭಾಗವಹಿಸಲಿದ್ದಾರೆ. ಜೊತೆಗೆ ಜ.8ರಂದು ಆಳ್ವಾಸ್ ವಿದ್ಯಾರ್ಥಿಸಿರಿ ಹಾಗೂ ಜ.9ರಂದು ಮೊದಲ ಬಾರಿಗೆ ‘ಆಳ್ವಾಸ್ ಯುವಸಿರಿ’ಯನ್ನು ಆಯೋಜಿಸಲಾಗುತ್ತಿದೆ.
ವೈವಿಧ್ಯಮಯ ಮೇಳಗಳು:
ನುಡಿಸಿರಿ–ವಿರಾಸತ್‌ನ ಪ್ರಮುಖ ಆಕರ್ಷಣೆಯಾಗಿ ಕೃಷಿಮೇಳ, ವಿಜ್ಞಾನ ಮೇಳ, ಆಹಾರ ಮೇಳ, ಪುಸ್ತಕ ಮೇಳ ಹಾಗೂ ಕಲಾ ಮೇಳಗಳು ಒಂದೇ ವೇದಿಕೆ ಯಲ್ಲಿ ಅನಾವರಣಗೊಳ್ಳಲಿವೆ. ಐದು ದಿನಗಳ ಈ ಕಾರ್ಯಕ್ರಮದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ₹500 ಶುಲ್ಕ ನಿಗದಿಪಡಿಸಲಾಗಿದೆ. ಸಾಹಿತ್ಯ, ಕಲೆ, ಸಂಸ್ಕೃತಿಯ ಈ ಮಹೋತ್ಸವದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನುಡಿಸಿರಿ–ವಿರಾಸತ್ 2027ರ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
