LATEST NEWS

ಕೊಂಕಣಿ ಸಮುದಾಯಗಳನ್ನು ಒಗ್ಗೂಡಿಸಲು ‘ಕೊಂಕನಿಜ್’ ವೇದಿಕೆ ಆರಂಭ

ಮಂಗಳೂರು: ವಿಶ್ವದಾದ್ಯಂತ ಹರಡಿರುವ ಕೊಂಕಣಿ ಮಾತನಾಡುವ ಸಮುದಾಯಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಮತ್ತು ಅವರ ನಡುವಿನ ಸಾಂಸ್ಕೃತಿಕ ಬಂಧವನ್ನು ಬಲಪಡಿಸುವ ಉದ್ದೇಶದಿಂದ ‘ಕೊಂಕನಿಜ್’ (KONKANIZ) ಎಂಬ ಸಮುದಾಯ ಆಧಾರಿತ ನೂತನ ವೇದಿಕೆಯನ್ನು ಮಂಗಳೂರಿನಲ್ಲಿ ಆರಂಭಿಸಲಾಗಿದೆ.

ಭಾಷೆಯ ಉಪಭಾಷೆಗಳು, ವಿಭಿನ್ನ ಲಿಪಿಗಳು ಹಾಗೂ ಭೌಗೋಳಿಕ ಗಡಿಗಳಿಂದ ಉಂಟಾಗಿರುವ ಅಂತರವನ್ನು ಕಡಿಮೆ ಮಾಡುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ. ಕೊಂಕಣಿ ಭಾಷೆ, ಆಹಾರ, ಸಂಗೀತ, ನೃತ್ಯ, ಚಲನಚಿತ್ರ, ಕ್ರೀಡೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಮೂಲಕ ಸಮುದಾಯಗಳ ನಡುವೆ ಸೇತುವೆ ನಿರ್ಮಿಸಲು ಈ ವೇದಿಕೆ ಕಾರ್ಯನಿರ್ವಹಿಸಲಿದೆ. ಮೆಂಡೋನ್ಸಾ ಫೌಂಡೇಶನ್‌ನ ಡಾ. ವಿವೇಕ್ ಮೆಂಡೋನ್ಸಾ ಅವರ ಸಕ್ರಿಯ ಬೆಂಬಲದೊಂದಿಗೆ ಈ ವೇದಿಕೆ ರೂಪುಗೊಂಡಿದೆ.

ನಾಚೋಂ-ಯಾ ಕುಂಪಸಾರ್’ ಚಿತ್ರ ಪ್ರದರ್ಶನ:

ಈ ವಿಶಾಲ ಆಶಯದ ಭಾಗವಾಗಿ, ಸಂತ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಕೊಂಕಣಿ ವಿಭಾಗದ ವತಿಯಿಂದ ಅಂತಾರಾಷ್ಟ್ರ ಮಟ್ಟದಲ್ಲಿ ಪ್ರಶಂಸೆ ಪಡೆದಿರುವ ‘ನಾಚೋಂ-ಯಾ ಕುಂಪಸಾರ್’ ಕೊಂಕಣಿ ಚಲನಚಿತ್ರದ ಪ್ರದರ್ಶನವನ್ನು ವಿಶ್ವವಿದ್ಯಾಲಯ ಆವರಣದ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕೊಂಕಣಿ ವಿಭಾಗದ ಮುಖ್ಯಸ್ಥೆ ಪ್ರೊ. ಫ್ಲೋರಾ ಕ್ಯಾಸ್ಟೆಲಿನೊ ಅವರ ನೇತೃತ್ವದಲ್ಲಿ, ರೆಕ್ಸ್ ಫರ್ನಾಂಡಿಸ್ ಹಾಗೂ ಚಿತ್ರದ ನಿರ್ದೇಶಕ ಬಾರ್ಡ್ರಾಯ್ ಬ್ಯಾರೆಟ್ಟೊ ಅವರ ಸಹಯೋಗದಲ್ಲಿ ಈ ಪ್ರದರ್ಶನ ನಡೆಯಿತು.

ಗೋವಾ ಫೋಕ್‌ಲೋರ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವು 24 ಅಂತಾರಾಷ್ಟ್ರೀಯ ಗೌರವಗಳು, 3 ರಾಷ್ಟ್ರೀಯ ಪ್ರಶಸ್ತಿಗಳು ಹಾಗೂ 10 ಗೋವಾ ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, 1960 ಮತ್ತು 70ರ ದಶಕದ ಗೋವಾದ ರೋಮಾಂಚಕ ಸಂಗೀತ ಲೋಕವನ್ನು ಅನಾವರಣಗೊಳಿಸುತ್ತದೆ.

ಸಾಂಸ್ಕೃತಿಕ ವಿನಿಮಯಕ್ಕೆ ನಾಂದಿ:

ಗೋವಾ ಮತ್ತು ಕರ್ನಾಟಕ ವಿಭಿನ್ನ ಗುರುತುಗಳನ್ನು ಹೊಂದಿದ್ದರೂ ಭಾಷೆ, ಸಂಗೀತ, ಆಹಾರ ಮತ್ತು ಇತಿಹಾಸದ ಮೂಲಕ ಪರಸ್ಪರ ಹತ್ತಿರವಾಗಿವೆ. ಯುವ ಪೀಳಿಗೆಗೆ ಈ ಆಳವಾದ ಸಾಂಸ್ಕೃತಿಕ ಸಂಬಂಧವನ್ನು ಪರಿಚಯಿಸಲು ಸಿನಿಮಾ ಅತ್ಯುತ್ತಮ ಮಾಧ್ಯಮ ಎಂದು ಪ್ರೊ. ಫ್ಲೋರಾ ಕ್ಯಾಸ್ಟೆಲಿನೊ, ರೆಕ್ಸ್ ಫರ್ನಾಂಡಿಸ್ ಮತ್ತು ಚಿತ್ರದ ನಿರ್ದೇಶಕ ಬಾರ್ಡ್ರಾಯ್ ಬ್ಯಾರೆಟ್ಟೊ ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಗೋವಾ–ಕರ್ನಾಟಕ ಸಾಂಸ್ಕೃತಿಕ ವಿನಿಮಯದ ಭಾಗವಾಗಿ ನಾಟಕ, ರಂಗಭೂಮಿ, ಸಂಗೀತ, ನೃತ್ಯ, ಆಹಾರ ಉತ್ಸವ ಮತ್ತು ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಹಸಿರಾವನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ವಿವೇಕ್ ಮೆಂಡೋನ್ಸಾ, ರೆಕ್ಸ್ ಫೆರ್ನಾಂಡಿಸ್, ಆಂಟೊನಿಯೊ ಫೆರ್ನಾಂಡಿಸ್, ಎಚ್ ಎಮ್ ಪೆರ್ನಾಲ್ ಮತ್ತು ಟೈಟಸ್ ನೊರೊನ್ಹಾ ಉಪಸ್ಥಿತರಿದ್ದರು.

Share News