LATEST NEWS

ಮುಡಾ ಮಹಾ ಯೋಜನೆ ಕರಡು ಪ್ರತಿಯ ಅನುಮೋದನೆಗೆ ಚರ್ಚೆ: ಉನ್ನತ ಮಟ್ಟದ ಸಭೆಯಲ್ಲಿ ಎಲ್.ಕೆ. ಅತೀಕ್ ಪರಿಶೀಲನೆ

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮಹಾ ಯೋಜನೆ (ಮಾಸ್ಟರ್ ಪ್ಲಾನ್) ಕರಡು ಪ್ರತಿಗೆ ಸರ್ಕಾರದಿಂದ ಶೀಘ್ರ ಅನುಮೋದನೆ ದೊರಕಿಸಿಕೊಡುವ ನಿಟ್ಟಿನಲ್ಲಿ ಮುಡಾ ಕಚೇರಿಯಲ್ಲಿ ಮಹತ್ವದ ಉನ್ನತ ಮಟ್ಟದ ಸಭೆ ಜರುಗಿತು.

ಮುಡಾ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಮುಖ್ಯಮಂತ್ರಿಯವರ ಆರ್ಥಿಕ ಹಾಗೂ ಹಣಕಾಸು ಸಲಹೆಗಾರರಾದ ಶ್ರೀ ಎಲ್.ಕೆ. ಅತೀಕ್ ಅವರು ಉಪಸ್ಥಿತರಿದ್ದು, ನಗರದ ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಮಂಗಳೂರು ಐ ಯೋಜನೆ ಹಾಗೂ ಕೋಸ್ಟಲ್ ರಸ್ತೆ ಅಭಿವೃದ್ಧಿ:

ಮಂಗಳೂರಿನ ಪ್ರತಿಷ್ಠಿತ ‘ಮಂಗಳೂರು ಐ’ (Mangaluru Eye) ಯೋಜನೆಗಾಗಿ ಕದ್ರಿ ಪಾರ್ಕ್ ಎದುರು 5 ಎಕರೆ ಜಾಗ ಮೀಸಲಿಡಲಾಗಿದ್ದು, ಈ ಯೋಜನೆಯ ಅನುಷ್ಠಾನದ ಸಿದ್ಧತೆಗಳ ಕುರಿತು ಎಲ್.ಕೆ. ಅತೀಕ್ ಅವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಇದರೊಂದಿಗೆ, ಬಟ್ಟಪ್ಪಾಡಿಯಿಂದ ಸಸಿಹಿತ್ಲುವರೆಗೆ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಕೋಸ್ಟಲ್ ರಸ್ತೆ ಅಭಿವೃದ್ಧಿ ಯೋಜನೆ, ಅದಕ್ಕಿರುವ ಸಿಆರ್‌ಝಡ್ (CRZ) ಸಮಸ್ಯೆಗಳು ಹಾಗೂ ಯೋಜನೆ ಅನುಷ್ಠಾನದ ಸಾಧಕ-ಬಾಧಕಗಳ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

ಸ್ಮಾರ್ಟ್ ರಸ್ತೆ ಮತ್ತು ಅಂಡರ್‌ಪಾಸ್ ನಿರ್ಮಾಣ:

ನಗರದ ಸಂಚಾರ ದಟ್ಟಣೆ ನಿವಾರಣೆಗೆ ಪೂರಕವಾಗಿ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಅಂಡರ್‌ಪಾಸ್ (ಕೆಳಸೇತುವೆ) ನಿರ್ಮಾಣ ಹಾಗೂ ಕೊಟ್ಟಾರ ಚೌಕಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದವರೆಗೆ (ಲೇಡಿಹಿಲ್) ಸ್ಮಾರ್ಟ್ ರಸ್ತೆ ನಿರ್ಮಿಸುವ ಯೋಜನೆಗಳ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿ ಮಂಗಳೂರಿನ ಭವಿಷ್ಯದ ಬೆಳವಣಿಗೆಗೆ ವೇಗ ನೀಡಬೇಕು ಎಂದು ಈ ಸಂದರ್ಭದಲ್ಲಿ ಒತ್ತು ನೀಡಲಾಯಿತು.

ಈ ಮಹತ್ವದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಮಂಗಳೂರು ನಗರ ಪಾಲಿಕೆ ಆಯುಕ್ತರಾದ ಶ್ರೀ ರಾಹುಲ್ ರತನ್ ಪಾಂಡೆ, ಮುಡಾ ಆಯುಕ್ತರಾದ ಶ್ರೀ ಮೊಹಮ್ಮದ್ ನಜೀರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಡಾ. ಜಿ. ಸಂತೋಷ್ ಕುಮಾರ್ ಆರ್ಕಿಟೆಕ್ಟ್ ಸುಪ್ರಿತ್ ಆಳ್ವ ಸೇರಿದಂತೆ ಕ್ರೆಡಾಯ್, ಪ್ರವಾಸೋದ್ಯಮ, ಕೆಯುಐಡಿಎಫ್‌ಸಿ (KUIDFC) ಹಾಗೂ ಸಿಆರ್‌ಝಡ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share News