ಕಾರ್ಕಳ: ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಸಾನೂರು ಜಂಕ್ಷನ್‌ನಲ್ಲಿ ಭಾನುವಾರ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಬಿ. ರಮಾನಾಥ ರೈ, ಸವಿತಾ ಹಾಗೂ ಇತರ ಹಲವರು ಗಾಯಗೊಂಡಿದ್ದಾರೆ.

ಮಾಜಿ ಸಚಿವ ರಮಾನಾಥ ರೈ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಚಲಿಸುತ್ತಿದ್ದ ಖಾಸಗಿ ಬಸ್ ಸಾನೂರು ಜಂಕ್ಷನ್ ಬಳಿ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹಾಗೂ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಹಾಗೂ ಗಂಭೀರ ಸ್ವರೂಪದ ಗಾಯಗಳಾಗಿವೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಕಾರಿನಲ್ಲಿ ಸಿಲುಕಿದ್ದ ರಮಾನಾಥ ರೈ ಹಾಗೂ ಇತರರನ್ನು ಸುರಕ್ಷಿತವಾಗಿ ಹೊರಗೆ ತೆಗೆದು, ತಕ್ಷಣವೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಬಸ್ಸಿನಲ್ಲಿದ್ದ ಗಾಯಾಳುಗಳನ್ನೂ ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಸಕಾಲದಲ್ಲಿ ಸಹಾಯ ಹಸ್ತ ಚಾಚಿದ್ದಾರೆ.
ಸ್ಥಳಕ್ಕೆ ಕಾರ್ಕಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
