LATEST NEWS

ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಶ್ರೀ ಭ್ರಾಮರಿ ಮಹಿಳಾ ಮಂಡಳಿ ಸಹಯೋಗದಲ್ಲಿ ‘ಕಾರ್ತಿಕ ದೀಪ’ ಕಾರ್ಯಕ್ರಮ

ಮಂಗಳೂರು: ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ) ಮತ್ತು ಶ್ರೀ ಭ್ರಾಮರಿ ಮಹಿಳಾ ಮಂಡಳಿ (ರಿ) ಇವರ ಜಂಟಿ ಸಹಯೋಗದಲ್ಲಿ ‘ಕಾರ್ತಿಕ ದೀಪ’ ಎಂಬ ವಿನೂತನ ಕಾರ್ಯಕ್ರಮವು ಉರ್ವಸ್ಟೋರ್‌ನಲ್ಲಿರುವ ಒಕ್ಕೂಟದ ‘ವನಿತಾಂಗಣ’ದಲ್ಲಿ ಯಶಸ್ವಿಯಾಗಿ ನಡೆಯಿತು.

ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂಚಲಾ ತೇಜೋಮಯ ಮಾತನಾಡಿ, “ಕಾರ್ತಿಕ ಮಾಸದಲ್ಲಿ ದೀಪಾವಳಿಯ ಸಾಲು ದೀಪಗಳು ಮನೆ-ಮನಗಳಲ್ಲಿ ಬೆಳಕು ತುಂಬುತ್ತವೆ. ಬಳಿಕ ತುಳಸಿ ಪೂಜೆ, ದೇವಸ್ಥಾನಗಳಲ್ಲಿ ದೀಪೋತ್ಸವ ಹೀಗೆ ಕಾರ್ತಿಕ ಮಾಸವಿಡೀ ಬೆಳಕಿನೊಂದಿಗೆ ನಮ್ಮ ಬದುಕು ಬೆಸೆದುಕೊಂಡಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ದೀಪಾವಳಿಯ ಆಶಯವನ್ನು ನಾವೆಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.

ಶ್ರೀ ಭ್ರಾಮರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಮನೋರಮಾ ಉಮೇಶನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ನಡೆದು ಬಂದ ಹಾದಿಯನ್ನು ಮೆಲುಕು ಹಾಕುತ್ತಾ ಗಣ್ಯರು ಹಾಗೂ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಆರೋಗ್ಯ ಮತ್ತು ಆಹಾರ ಪದ್ಧತಿ ಕುರಿತು ಮಾಹಿತಿ:

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಆಹಾರ ತಜ್ಞೆ ಶ್ರೀಮತಿ ಅಕ್ಷತಾ ಬಾಳಿಗಾ, “ಮಹಿಳೆಯರು ತಮ್ಮ ನಲವತ್ತರ ವಯಸ್ಸಿನ ನಂತರ ಕಬ್ಬಿಣಾಂಶ ಮತ್ತು ಪ್ರೋಟೀನ್ ಯುಕ್ತ ಆಹಾರವನ್ನು ನಿಯಮಿತವಾಗಿ ಸೇವಿಸುವುದು ಅತ್ಯಗತ್ಯ. ಸರಿಯಾದ ಆಹಾರ ಪದ್ಧತಿಯ ಜೊತೆಗೆ ನಿಯಮಿತ ವ್ಯಾಯಾಮ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು,” ಎಂದು ಉಪಯುಕ್ತ ಮಾಹಿತಿ ನೀಡಿದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೀ ಭ್ರಾಮರಿ ಮಹಿಳಾ ಮಂಡಳಿಯ ಸದಸ್ಯೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಸಪ್ರಶ್ನೆ ಸ್ಪರ್ಧೆಗಳು ನಡೆದವು.

ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ದೇವಕಿ ಅಚ್ಯುತ, ರೇಖಾ ಶೆಟ್ಟಿ, ಅನುರಾಧಾ ರಾಜೀವ್, ಭಾರತಿ ಮಂಜುನಾಥ್, ಜಯ ಕುಮಾರಿ ಹಾಗೂ ಶ್ರೀ ಭ್ರಾಮರಿ ಮಹಿಳಾ ಮಂಡಳಿಯ ಪದಾಧಿಕಾರಿಗಳಾದ ಗಾಯತ್ರಿ ರಾವ್, ಪದ್ಮನಯನ, ಶೈಲಜಾ ರಾವ್ ಉಪಸ್ಥಿತರಿದ್ದರು. ಗಾಯತ್ರಿ ಬಿ.ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share News