LATEST NEWS

ಮಾಂಡ್ ಸೊಭಾಣ್ ‘ತಿಂಗಳ ವೇದಿಕೆ’ಗೆ 300 ಮಾಸಗಳ ಸಂಭ್ರಮ: ಡಿ. 6ರಂದು ಮಂಗಳೂರಿನಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್ ನ್ಯಾಶನಲ್ ಶೋ’

ಮಂಗಳೂರು ನ. 28: ಕೊಂಕಣಿ ಕಲೆ, ಸಂಸ್ಕೃತಿ ಮತ್ತು ಪ್ರತಿಭೆಗಳಿಗೆ ನಿರಂತರ ವೇದಿಕೆ ಕಲ್ಪಿಸುತ್ತಾ ಬಂದಿರುವ ಮಾಂಡ್ ಸೊಭಾಣ್ ಸಂಸ್ಥೆಯ ‘ಮ್ಹಯ್ನ್ಯಾಳಿ ಮಾಂಚಿ’ (ತಿಂಗಳ ವೇದಿಕೆ) ಸರಣಿಯು 300 ತಿಂಗಳ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದೆ. ಈ 25 ವರ್ಷಗಳ ಯಶೋಗಾಥೆಯ ಸಂಭ್ರಮಕ್ಕಾಗಿ ಡಿಸೆಂಬರ್ 06, 2026 ರಂದು ಸಂಜೆ 6.00 ಗಂಟೆಗೆ ಶಕ್ತಿನಗರದ ಕಲಾಂಗಣ ಮೈದಾನದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್ ನ್ಯಾಶನಲ್ ಶೋ’ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಲುವಿ ಪಿಂಟೊ ತಿಳಿಸಿದರು.

ಶುಕ್ರವಾರ ನಗರದ ಹೋಟೆಲ್ ಗೋಲ್ಡ್ ಫಿಂಚ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರಗಳನ್ನು ನೀಡಿದರು.

25 ವರ್ಷಗಳ ನಿರಂತರತೆ ಮತ್ತು ಕಲಾ ವೈವಿಧ್ಯ:

2001ರ ಡಿಸೆಂಬರ್ 1ರಂದು ಖ್ಯಾತ ನಟ ನಾಸಿರುದ್ದೀನ್ ಶಹಾ ಕಲಾಂಗಣ ಬಯಲು ರಂಗಮಂದಿರವನ್ನು ಲೋಕಾರ್ಪಣೆಗೊಳಿಸಿದ್ದರು. 2002ರ ಜನವರಿ 6ರಿಂದ ಆರಂಭಗೊಂಡ ಈ ಸರಣಿಯು, ಕಳೆದ 25 ವರ್ಷಗಳಿಂದ ಪ್ರತಿ ತಿಂಗಳ ಮೊದಲ ಭಾನುವಾರ ಸಂಜೆ 6.30ಕ್ಕೆ ತಪ್ಪದೇ ನಡೆಯುತ್ತಾ ಬಂದಿದೆ. ಕ್ರೈಸ್ತ, ಜಿಎಸ್‌ಬಿ, ಕುಡ್ಮಿ, ಖಾರ್ವಿ, ಸಿದ್ದಿ, ದಾಲ್ದಿ, ನವಾಯತಿ ಸೇರಿದಂತೆ ಕೊಂಕಣಿಯ ಎಲ್ಲಾ ಭಾಷಾ ಪ್ರಬೇಧಗಳಿಗೆ ಮತ್ತು ಯಕ್ಷಗಾನ, ತಿಯಾತ್ರ್, ಜಾಗೊರ್, ಮಾಂಡೊ, ಫುಗ್ಡಿ ಮುಂತಾದ ಜನಪದ ಹಾಗೂ ರಂಗ ಪ್ರಕಾರಗಳಿಗೆ ಇಲ್ಲಿ ವೇದಿಕೆ ಕಲ್ಪಿಸಲಾಗಿದೆ. ಸಂಸ್ಥಾಪಕ ದಿ. ಎರಿಕ್ ಒಝೇರಿಯೊ ಅವರ ಆಶಯದಂತೆ ಕಲಾವಿದರಿಗೆ ಸೂಕ್ತ ಗೌರವ ಸಂಭಾವನೆ, ಪ್ರಯಾಣ ಮತ್ತು ವಸತಿ ಸೌಲಭ್ಯ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

300ನೇ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು:

• ಅಂತರರಾಷ್ಟ್ರೀಯ ಸಂಗೀತ ಮೆರುಗು: ದುಬೈಯ ಖ್ಯಾತ ಗಿಟಾರ್ ಮಾಯೆಸ್ಟ್ರೊ ಆಲ್ವಿನ್ ಫೆರ್ನಾಂಡಿಸ್ ಅವರ ಸಂಗೀತ ನಿರ್ದೇಶನದಲ್ಲಿ, ಶ್ರೀಲಂಕಾದ ಅಂತರರಾಷ್ಟ್ರೀಯ ಖ್ಯಾತಿಯ ‘ಎಲ್ಲೋ ಬೀಟ್ಸ್’ (Yellow Beats) ತಂಡವು ಪ್ರದರ್ಶನ ನೀಡಲಿದೆ. ಹಳೆಯ ಜನಪ್ರಿಯ ಹಾಗೂ ಈ ಕಾರ್ಯಕ್ರಮಕ್ಕಾಗಿಯೇ ರಚಿಸಲಾದ ನೂತನ ಬಾಯ್ಲಾ ಹಾಡುಗಳು ಪ್ರೇಕ್ಷಕರನ್ನು ರಂಜಿಸಲಿವೆ.
• ನೃತ್ಯ ಮತ್ತು ಫ್ಯಾಷನ್ ವಾಕ್: ನಾಚ್ ಸೊಭಾಣ್ ಮತ್ತು ಅರ್ಬನ್ ಗ್ರೂವ್ ತಂಡಗಳಿಂದ ಆಕರ್ಷಕ ನೃತ್ಯ ಪ್ರದರ್ಶನವಿರಲಿದೆ. ಅಲ್ಲದೆ, ವೆಂಜ್ ಮಾಡೆಲಿಂಗ್ ಅಕಾಡೆಮಿಯ ವಿದ್ಯಾರ್ಥಿಗಳು ಕೊಂಕಣಿ ಸಾಂಪ್ರದಾಯಿಕ ಉಡುಗೆಯ ಫ್ಯಾಷನ್ ವಾಕ್ (Fashion Walk) ನಡೆಸಿಕೊಡಲಿದ್ದಾರೆ.

ಬೆಂಗಳೂರಿನ ಉದ್ಯಮಿ ಹಾಗೂ ದಾನಿ ಆಸ್ಟಿನ್ ರೋಚ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ನಿರ್ದೇಶಕ ಆಲ್ವಿನ್ ಫೆರ್ನಾಂಡಿಸ್, ಕಲಾಂಗಣ ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊ, ಸಂಘಟಕ ಸ್ಟ್ಯಾನಿ ಆಲ್ವಾರಿಸ್, ಉಪಾಧ್ಯಕ್ಷ ನವೀನ್ ಲೋಬೊ, ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಹಾಗೂ ಖಜಾಂಚಿ ಎಲ್ರೊನ್ ರೊಡ್ರಿಗಸ್ ಉಪಸ್ಥಿತರಿದ್ದರು.

Share News