ಮಂಗಳೂರು, ನ. 28: ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಮತ್ತು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (M.I.O) ಆಸ್ಪತ್ರೆಯು ‘M.I.O ಕ್ಯಾನ್ಸರ್ ಸ್ಕ್ರೀನರ್ ಆ್ಯಪ್’ ಅನ್ನು ಬಿಡುಗಡೆಗೊಳಿಸಿದೆ.

ನಗರದ ದೀಪಾ ಕಂಫರ್ಟ್ಸ್ನ ಶಹನಾಯಿ ಹಾಲ್ನಲ್ಲಿ ಶನಿವಾರ (ನ. 28) ನಡೆದ ಸಮಾರಂಭದಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜಸೇವಕ ಮೈಕೆಲ್ ಡಿ’ಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆ್ಯಪ್ ಬಿಡುಗಡೆಗೆ ಚಾಲನೆ ನೀಡಿದರು. ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಅಧ್ಯಕ್ಷ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಶಾಸಕ ಡಾ. ವೈ. ಭರತ್ ಶೆಟ್ಟಿ ಹಾಗೂ ದೈಜಿವರ್ಲ್ಡ್ ಮೀಡಿಯಾ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು.

ಈ ಕುರಿತು ಮಾಹಿತಿ ನೀಡಿರುವ M.I.O ನಿರ್ದೇಶಕ ಡಾ. ಸುರೇಶ್ ರಾವ್, “ರೋಗವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು ರೋಗಿಯ ಬದುಕುಳಿಯುವಿಕೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಈ ಆ್ಯಪ್ ಬಳಕೆದಾರರ ವಯಸ್ಸು, ಕುಟುಂಬದ ಇತಿಹಾಸ, ಜೀವನಶೈಲಿ ಮತ್ತು ಲಕ್ಷಣಗಳನ್ನು ಆಧರಿಸಿ ಅಪಾಯವನ್ನು ಸಾಮಾನ್ಯ, ಮಧ್ಯಂತರ, ಮಧ್ಯಮ ಮತ್ತು ಹೆಚ್ಚಿನ ಅಪಾಯ ಎಂದು ನಾಲ್ಕು ವರ್ಗಗಳಾಗಿ ವಿಂಗಡಿಸಿ ಮಾರ್ಗದರ್ಶನ ನೀಡುತ್ತದೆ,” ಎಂದರು.
ಬಾಯಿ, ಸ್ತನ, ಗರ್ಭಕಂಠ, ಶ್ವಾಸಕೋಶ, ಪ್ರಾಸ್ಟೇಟ್ ಸೇರಿದಂತೆ 9 ಪ್ರಮುಖ ಕ್ಯಾನ್ಸರ್ಗಳ ಕುರಿತು ಪ್ರಶ್ನಾವಳಿಗಳನ್ನು ಇದು ಒಳಗೊಂಡಿದೆ. ಬಳಕೆದಾರರ ಯಾವುದೇ ಮಾಹಿತಿಯನ್ನು ಆ್ಯಪ್ ಸಂಗ್ರಹಿಸುವುದಿಲ್ಲ; ಎಲ್ಲಾ ಮಾಹಿತಿಯು ಮೊಬೈಲ್ನಲ್ಲಿಯೇ ಸುರಕ್ಷಿತವಾಗಿರುತ್ತದೆ. ಸಾರ್ವಜನಿಕರಲ್ಲದೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗೂ ಇದು ಸಹಕಾರಿಯಾಗಿದೆ.
ಈ ಆ್ಯಪ್ ಕೇವಲ ಅಪಾಯದ ಮೌಲ್ಯಮಾಪನ ಮತ್ತು ಜಾಗೃತಿಗಾಗಿ ಮಾತ್ರವಾಗಿದ್ದು, ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ. ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಉಚಿತವಾಗಿ ಲಭ್ಯವಿದೆ.
