ಮಂಗಳೂರು: ಪ್ರಸಿದ್ಧ ಕೊಂಕಣಿ ಸಾಂಸ್ಕೃತಿಕ ಸಂಘಟನೆ ‘ಮಾಂಡ್ ಸೊಭಾಣ್’ ಇದರ ತಿಂಗಳ ಸರಣಿಯ 294 ನೇ ಕಾರ್ಯಕ್ರಮವು ಜೂನ್ 07 ರಂದು ಶಕ್ತಿನಗರದ ಕಲಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಸಂಗೀತ ಉಪಕರಣಗಳ ಮಾರಾಟ ಮಳಿಗೆ ‘ಸಿಂಫನಿ’ ಇದರ ಮಾಲಕರಾದ ಲೊಯ್ ನೊರೊನ್ಹಾ ಇವರು ಸಾಂಪ್ರದಾಯಿಕವಾಗಿ ಗಂಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿ ಪಿಂಟೊ ಮತ್ತು ಕಾರ್ಯದರ್ಶಿ ರೊನಿ ಕ್ರಾಸ್ತಾ ಉಪಸ್ಥಿತರಿದ್ದರು.

ಉದ್ಘಾಟನೆಯ ನಂತರ ಪ್ರಸಿದ್ಧ ‘ಕೊಮಿಡಿ ಕಂಪೆನಿ’ ನಾಟಕ ತಂಡದಿಂದ ಭರಪೂರ ಹಾಸ್ಯದ ರೇಜಿಗೆಯನ್ನು ಹೊತ್ತು ತಂದ ಕೊಂಕಣಿ ನಾಟಕ ‘ಉಪ್ರಾಂತ್‌ಚ್ ಕಳ್ಚೆಂ’ ಪ್ರದರ್ಶನಗೊಂಡಿತು. ಈ ನಾಟಕವನ್ನು ನೆಲ್ಲು ಪೆರ್ಮನ್ನೂರು ಅವರು ರಚಿಸಿ, ನಿರ್ದೇಶಿಸಿದ್ದರು. ವೇದಿಕೆಯಲ್ಲಿ ಅಸುಂತಾ, ಸಂದೀಪ್, ಲ್ಯಾನ್ಸಿ, ದೀಪಕ್, ಮರಿಯಾ, ಜಾಸ್ಮಿನ್, ರೊಯ್ಸ್‌ಟನ್ ಮತ್ತು ರೊಮಾರಿಯೊ ತಮ್ಮ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ರವೀನ್ ಮಾರ್ಟಿಸ್ ಅವರ ಸಂಗೀತ ಮತ್ತು ಆರ್ಲ್ ಅವರ ಬೆಳಕಿನ ಸಂಯೋಜನೆ ನಾಟಕಕ್ಕೆ ಮತ್ತಷ್ಟು ಮೆರುಗು ನೀಡಿತು.
ನಾಟಕದ ಬಳಿಕ ಎಲ್ರೊನ್ ರೊಡ್ರಿಗಸ್ ನೇತೃತ್ವದ ‘ಮಜಾ ಮೊಗಿ’ ತಂಡದಿಂದ ಸಭಿಕರನ್ನು ಜಿಗಿಯುವಂತೆ ಮಾಡಿದ ಪಾರ್ಟಿ ಹಾಡುಗಳ ಗಾಯನ ನಡೆಯಿತು. ಗಾಯಕರಾದ ಜೊಯ್ಸ್ ಒಝೇರಿಯೊ, ರೈನಾ ಸಿಕ್ವೇರಾ, ಸ್ಟೀವನ್ ಕುಟಿನ್ಹಾ, ಶಿಲ್ಪಾ ಕುಟಿನ್ಹಾ, ಸುನೀಲ್ ಮೊಂತೇರೊ, ರೊನಿ ಅರುಣ್, ವರ್ಲಿನ್ ಗೋವಿಯಸ್ ಮತ್ತು ವರ್ನಾ ಡಿಸೋಜ ತಮ್ಮ ಧ್ವನಿಯ ಮೂಲಕ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದರು. ಕ್ರೀಥನ್ ಡಿಸೋಜ, ರೆನೊಲ್ಡ್ ಲೋಬೊ ಮತ್ತು ಆಸ್ಟನ್ ಡಿಸೋಜ ಸಂಗೀತಗಾರರಾಗಿ ಸಹಕರಿಸಿದರು.
ಕಾರ್ಯಕ್ರಮವನ್ನು ವಿತೊರಿ ಕಾರ್ಕಳ ಮತ್ತು ಸೃಜನಾ ಮತಾಯಸ್ ಅವರು ನಿರ್ವಹಿಸಿದರು. ಕೊಂಕಣಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಆಸ್ವಾದಿಸಿದರು.

