ಮಂಗಳೂರು, ಜುಲೈ 18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಎನ್ಯುಮರೇಷನ್ ಪ್ರಕ್ರಿಯೆಯಲ್ಲಿ ಕಂಡುಬರುತ್ತಿರುವ ಅಕ್ರಮಗಳು ಮತ್ತು ಅವ್ಯವಸ್ಥೆಗಳ ಕುರಿತು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.


ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿ’ಸೋಜಾ ಅವರು, ಜಿಲ್ಲೆಯಾದ್ಯಂತ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಯಾಗುವಂತೆ ಕಾಂಗ್ರೆಸ್ ಪಕ್ಷವು 1,750ಕ್ಕೂ ಅಧಿಕ ಬಿ.ಎಲ್.ಎ. (Booth Level Agents)ಗಳನ್ನು ನೇಮಿಸಿದೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಪಕ್ಷವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾಡಳಿತವೂ ವ್ಯವಸ್ಥಿತವಾಗಿ ಪ್ರಕ್ರಿಯೆ ನಡೆಸಲು ಪ್ರಯತ್ನಿಸುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇತ್ತೀಚೆಗೆ ಕೆಲವು ಕಡೆಗಳಲ್ಲಿ ನಿಯಮ ಉಲ್ಲಂಘನೆ ಹಾಗೂ ಪ್ರಕ್ರಿಯೆಯ ದುರುಪಯೋಗ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದರು.
ಕೆಲವು ಬಿ.ಎಲ್.ಒ.ಗಳಿಗೆ ರಾಜಕೀಯ ವ್ಯಕ್ತಿಗಳು ಹಳೆಯ ಮತದಾರರ ಪಟ್ಟಿಯಲ್ಲಿರುವ, ಈಗ ಆ ವಿಳಾಸದಲ್ಲಿ ವಾಸವಿಲ್ಲದವರು ಅಥವಾ ಮನೆಗಳನ್ನು ಮಾರಾಟ ಮಾಡಿ ಸ್ಥಳಾಂತರಗೊಂಡಿರುವವರ ಎನ್ಯುಮರೇಷನ್ ಫಾರಂಗಳನ್ನು ನೀಡಿ ಅಕ್ರಮವಾಗಿ ಸಕ್ರಮಗೊಳಿಸಲು ಪ್ರಯತ್ನಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಕೆಲವು ಕಾಲನಿಗಳಲ್ಲಿ ಮನೆಗಳು ನೆಲಸಮವಾಗಿದ್ದರೂ, ಹಳೆಯ ಮತದಾರರ ಪಟ್ಟಿಯನ್ನು ಆಧರಿಸಿ ದಾಖಲೆಗಳನ್ನು ಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು
ಇದಲ್ಲದೆ, ಹಲವೆಡೆ ಬಿ.ಎಲ್.ಒ.ಗಳು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಬದಲು ಕೇವಲ ಫಾರಂಗಳನ್ನು ವಿತರಿಸಿ, ಮತದಾರರೇ ಭರ್ತಿ ಮಾಡಿ ತಂದುಕೊಡಬೇಕೆಂದು ಸೂಚಿಸುತ್ತಿರುವುದು ಕಂಡುಬಂದಿದೆ. ಇದರಿಂದ ಫಾರಂ ಭರ್ತಿ ಮಾಡುವ ವಿಧಾನ ತಿಳಿಯದ ಅನೇಕ ಮತದಾರರು ನೋಂದಣಿ ಪ್ರಕ್ರಿಯೆಯಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಕೆಲವೆಡೆ ಬಿ.ಎಲ್.ಒ.ಗಳ ಬದಲಾಗಿ ರಾಜಕೀಯ ಪಕ್ಷಗಳ ಏಜೆಂಟರ ಮೂಲಕ ಫಾರಂಗಳನ್ನು ವಿತರಿಸಲಾಗುತ್ತಿದ್ದು, ಮನೆಯಲ್ಲಿ ಇಲ್ಲದ ಮತದಾರರಿಗೆ ಫಾರಂ ನೀಡದೇ ಇರುವ ಘಟನೆಗಳೂ ವರದಿಯಾಗಿವೆ. ನಿಯಮಾನುಸಾರ ಬಿ.ಎಲ್.ಒ.ಗಳು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಅಗತ್ಯ ಸಹಕಾರ ನೀಡಬೇಕು ಹಾಗೂ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಿಯೋಗ ಒತ್ತಾಯಿಸಿತು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಈ ರೀತಿಯ ದೂರುಗಳು ತಮ್ಮ ಗಮನಕ್ಕೂ ಬಂದಿದ್ದು, ಕೆಲವು ಕಡೆಗಳಲ್ಲಿ ಮತದಾರರ ಸಹಿ ಇಲ್ಲದೆ ಫಾರಂಗಳನ್ನು ಸಲ್ಲಿಸಿರುವ ಪ್ರಕರಣಗಳ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.
ಯಾವುದೇ ಅರ್ಹ ಮತದಾರರು ನೋಂದಣಿಯಿಂದ ವಂಚಿತರಾಗದಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಬಿ.ಎಲ್.ಒ.ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದು ಐವನ್ ಡಿʼಸೋಜಾ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ. ಈ ನಿಯೋಗದಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ ಹಾಗೂ ಭಾಸ್ಕರ್ ಮೊಯ್ಲಿ, ಮಾಜಿ ಉಪಮೇಯರ್ ಶೇಷಮ್ಮ, ಮಾಜಿ ಕಾರ್ಪೊರೇಟರ್‌ಗಳಾದ ನವೀನ್ ಡಿ’ಸೋಜಾ, ಕೇಶವ ಮರೋಳಿ, ಚೇತನ್ ಕುಮಾರ್, ಭಾಸ್ಕರ್ ರಾವ್, ಅಪ್ಪಿ.ಎಸ್, ನಾಗೇಂದ್ರ ಕುಮಾರ್, ಸತೀಶ್ ಪೆಂಗಲ್, ನಾಯಕರಾದ ಹಬೀಬುಲ್ಲಾ ಕಣ್ಣೂರ್, ಪ್ರತಿಭಾ, ರವಿ ಉಪಸ್ಥಿತರಿದ್ದರು.


