• Home  
  • ಉರ್ವಾ ಸುಂಕದಕಟ್ಟೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ: ಸ್ಥಳಕ್ಕೆ ಐವನ್ ಡಿ’ಸೋಜಾ ಭೇಟಿ 24 ಗಂಟೆ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ
- LATEST NEWS

ಉರ್ವಾ ಸುಂಕದಕಟ್ಟೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ: ಸ್ಥಳಕ್ಕೆ ಐವನ್ ಡಿ’ಸೋಜಾ ಭೇಟಿ 24 ಗಂಟೆ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ

ಮಂಗಳೂರು, ಜುಲೈ 18: ಮಂಗಳೂರು ನಗರದ ಉರ್ವಾ ಸ್ಫೋರ್ ಸಮೀಪದ ಸುಂಕದಕಟ್ಟೆ ಪ್ರದೇಶದಲ್ಲಿ ಕುಡಿಯುವ ನೀರಿನ ಅಸಮರ್ಪಕ ಪೂರೈಕೆಯಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ನೀರು ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ನಿರಂತರ ಮಳೆಯಾಗುತ್ತಿದ್ದರೂ ಪ್ರದೇಶದಲ್ಲಿ ಕುಡಿಯುವ ನೀರನ್ನು ರೇಷನಿಂಗ್ ಪದ್ಧತಿಯಲ್ಲಿ ಮಾತ್ರ ಪೂರೈಸಲಾಗುತ್ತಿದ್ದು, ಅದೂ ರಾತ್ರಿ 12 […]

Share News

ಮಂಗಳೂರು, ಜುಲೈ 18: ಮಂಗಳೂರು ನಗರದ ಉರ್ವಾ ಸ್ಫೋರ್ ಸಮೀಪದ ಸುಂಕದಕಟ್ಟೆ ಪ್ರದೇಶದಲ್ಲಿ ಕುಡಿಯುವ ನೀರಿನ ಅಸಮರ್ಪಕ ಪೂರೈಕೆಯಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ನೀರು ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚೆ ನಡೆಸಿದರು.


ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ನಿರಂತರ ಮಳೆಯಾಗುತ್ತಿದ್ದರೂ ಪ್ರದೇಶದಲ್ಲಿ ಕುಡಿಯುವ ನೀರನ್ನು ರೇಷನಿಂಗ್ ಪದ್ಧತಿಯಲ್ಲಿ ಮಾತ್ರ ಪೂರೈಸಲಾಗುತ್ತಿದ್ದು, ಅದೂ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯೊಳಗೆ ಮಾತ್ರ ನೀರು ಬರುತ್ತಿದೆ ಎಂದು ದೂರಿದರು. ಅಲ್ಲದೆ ನೀರಿನ ಒತ್ತಡ (ಪ್ರೆಷರ್) ಸಮರ್ಪಕವಾಗಿಲ್ಲದ ಕಾರಣ ಅನೇಕ ಮನೆಗಳಿಗೆ ನೀರು ತಲುಪುತ್ತಿಲ್ಲ. ಉದ್ಯೋಗಕ್ಕೆ ತೆರಳುವವರು ಹಾಗೂ ಚಿಕ್ಕ ಮಕ್ಕಳಿರುವ ಕುಟುಂಬಗಳಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಇದಲ್ಲದೆ, ಪೂರೈಕೆಯಾಗುತ್ತಿರುವ ನೀರಿನ ಗುಣಮಟ್ಟವೂ ತೃಪ್ತಿಕರವಾಗಿಲ್ಲ. ಬೋರ್‌ವೆಲ್ ನೀರನ್ನು ಪೂರೈಸಲಾಗುತ್ತಿದ್ದು, ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.

ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಐವನ್ ಡಿ’ಸೋಜಾ ಅವರು, ಉರ್ವಾ ಸುಂಕದಕಟ್ಟೆ ಪ್ರದೇಶದ ನಿವಾಸಿಗಳಿಗೆ ಸಾಧ್ಯವಾದಷ್ಟು 24 ಗಂಟೆಗಳ ನಿರಂತರ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಅನೇಕ ಮನೆಗಳಲ್ಲಿ ನೀರು ಸಂಗ್ರಹಿಸಲು ಸಂಪ್ ಅಥವಾ ಟ್ಯಾಂಕ್ ವ್ಯವಸ್ಥೆ ಇಲ್ಲದಿರುವುದ ರಿಂದ, ಬಡ ಹಾಗೂ ಅಗತ್ಯವಿರುವ ಕುಟುಂಬಗಳಿಗೆ ಸಿಂಟೆಕ್ಸ್ ನೀರಿನ ಟ್ಯಾಂಕ್‌ಗಳನ್ನು ವಿತರಿಸುವ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಈ ಸಮಸ್ಯೆಯ ಕುರಿತು ಶೀಘ್ರದಲ್ಲೇ ಜಿಲ್ಲಾಧಿಕಾರಿ ಗಳನ್ನು ಭೇಟಿ ಮಾಡಿ ಶಾಶ್ವತ ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗುವುದು ಎಂದು ಐವನ್ ಡಿ’ಸೋಜಾ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಸ್ಥಳೀಯ ಮುಖಂಡ ಚೇತನ್ ಉರ್ವಾ ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Share News