• Home  
  • ‘ಸ್ವಚ್ಛ ಭಾರತ್’ ಬಸ್ ತಂಗುದಾಣದಲ್ಲಿ ಗ್ಲಾಸ್ ಚೂರುಗಳ ರಾಶಿ: ವಿದ್ಯಾರ್ಥಿಗಳ ಸುರಕ್ಷತೆಗೆ ಧಕ್ಕೆ, ಪಾಲಿಕೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ
- LATEST NEWS

‘ಸ್ವಚ್ಛ ಭಾರತ್’ ಬಸ್ ತಂಗುದಾಣದಲ್ಲಿ ಗ್ಲಾಸ್ ಚೂರುಗಳ ರಾಶಿ: ವಿದ್ಯಾರ್ಥಿಗಳ ಸುರಕ್ಷತೆಗೆ ಧಕ್ಕೆ, ಪಾಲಿಕೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ

ಮಂಗಳೂರು:ನಗರದ ಹೃದಯಭಾಗದಲ್ಲಿರುವ ಬೆಂದೂರ್ ಸೇಂಟ್ ಆಗ್ನೆಸ್ ಶಾಲಾ-ಕಾಲೇಜು ಸಮೀಪದ ಬಸ್ ತಂಗುದಾಣವು ಪ್ರಸ್ತುತ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಪಾಲಿಗೆ ಅಪಾಯಕಾರಿಯಾಗಿ ಮಾರ್ಪಟ್ಟಿದ್ದು, ಮಂಗಳೂರು ಮಹಾನಗರ ಪಾಲಿಕೆಯ ತೀವ್ರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಕೆಲವು ದಿನಗಳ ಹಿಂದೆ ಸಂಭವಿಸಿದ ಮರ ಬಿದ್ದ ಘಟನೆಯಿಂದಾಗಿ ಈ ಸುಸಜ್ಜಿತ ಬಸ್ ತಂಗುದಾಣದ ಗ್ಲಾಸ್‌ಗಳು ಒಡೆದು ಚೂರುಚೂರಾಗಿವೆ. ಆದರೆ, ಘಟನೆ ನಡೆದು ಹಲವು ದಿನಗಳು ಕಳೆದರೂ ಒಡೆದ ಗ್ಲಾಸ್ ಚೂರುಗಳನ್ನು ಸ್ಥಳದಿಂದ ತೆರವುಗೊಳಿಸದೆ ಹಾಗೆಯೇ ಬಿಡಲಾಗಿದೆ. ಬಸ್ ತಂಗುದಾಣದ ಆಸನಗಳು ಹಾಗೂ ನೆಲದಾದ್ಯಂತ ಈ […]

Share News

ಮಂಗಳೂರು:ನಗರದ ಹೃದಯಭಾಗದಲ್ಲಿರುವ ಬೆಂದೂರ್ ಸೇಂಟ್ ಆಗ್ನೆಸ್ ಶಾಲಾ-ಕಾಲೇಜು ಸಮೀಪದ ಬಸ್ ತಂಗುದಾಣವು ಪ್ರಸ್ತುತ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಪಾಲಿಗೆ ಅಪಾಯಕಾರಿಯಾಗಿ ಮಾರ್ಪಟ್ಟಿದ್ದು, ಮಂಗಳೂರು ಮಹಾನಗರ ಪಾಲಿಕೆಯ ತೀವ್ರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಕೆಲವು ದಿನಗಳ ಹಿಂದೆ ಸಂಭವಿಸಿದ ಮರ ಬಿದ್ದ ಘಟನೆಯಿಂದಾಗಿ ಈ ಸುಸಜ್ಜಿತ ಬಸ್ ತಂಗುದಾಣದ ಗ್ಲಾಸ್‌ಗಳು ಒಡೆದು ಚೂರುಚೂರಾಗಿವೆ. ಆದರೆ, ಘಟನೆ ನಡೆದು ಹಲವು ದಿನಗಳು ಕಳೆದರೂ ಒಡೆದ ಗ್ಲಾಸ್ ಚೂರುಗಳನ್ನು ಸ್ಥಳದಿಂದ ತೆರವುಗೊಳಿಸದೆ ಹಾಗೆಯೇ ಬಿಡಲಾಗಿದೆ. ಬಸ್ ತಂಗುದಾಣದ ಆಸನಗಳು ಹಾಗೂ ನೆಲದಾದ್ಯಂತ ಈ ಗ್ಲಾಸ್ ಚೂರುಗಳು ಹರಡಿಕೊಂಡಿದ್ದು, ಸಾರ್ವಜನಿಕರ ಓಡಾಟಕ್ಕೆ ತೀವ್ರ ಆತಂಕ ಸೃಷ್ಟಿಸಿದೆ.

ಈ ತಂಗುದಾಣದಲ್ಲಿ ಪ್ರತಿನಿತ್ಯ ಸೇಂಟ್ ಆಗ್ನೆಸ್ ಹಾಗೂ ಸುತ್ತಮುತ್ತಲ ಶಿಕ್ಷಣ ಸಂಸ್ಥೆಗಳ ಸಾವಿರಾರು ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಾರ್ವಜನಿಕರು ಬಸ್ಸಿಗಾಗಿ ಕಾಯುತ್ತಾ ನಿಲ್ಲುತ್ತಾರೆ. ಸಣ್ಣ ಅಜಾಗರೂಕತೆಯಿಂದ ಈ ತೀಕ್ಷ್ಣವಾದ ಗ್ಲಾಸ್ ಚೂರುಗಳು ವಿದ್ಯಾರ್ಥಿಗಳ ಕಾಲಿಗೆ ಅಥವಾ ಸಾರ್ವಜನಿಕರಿಗೆ ತಾಗಿ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಹೆಸರು ‘ಸ್ವಚ್ಛ ಭಾರತ್’– ವಾಸ್ತವದಲ್ಲಿ ನರಕ:

ವಿಪರ್ಯಾಸವೆಂದರೆ, ಈ ಬಸ್ ತಂಗುದಾಣಕ್ಕೆ ‘ಸ್ವಚ್ಛ ಭಾರತ್ ಬಸ್ ತಂಗುದಾಣ’ ಎಂದು ದೊಡ್ಡದಾಗಿ ಹೆಸರಿಸಲಾಗಿದೆ. ಆದರೆ ನಗರದ ಪ್ರಮುಖ ರಸ್ತೆಯಲ್ಲೇ ಇರುವ ಈ ತಂಗುದಾಣದ ದುಸ್ಥಿತಿ ಅಧಿಕಾರಿಗಳ ಕಣ್ಣಿಗೆ ಬೀಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುವ ಮಂಗಳೂರಿನ ಹೃದಯಭಾಗದಲ್ಲೇ ಇಂತಹ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.

ಮಹಾನಗರ ಪಾಲಿಕೆಯು ಯಾವುದೇ ದೊಡ್ಡ ಅನಾಹುತ ಸಂಭವಿಸುವ ಮುನ್ನ ತಕ್ಷಣವೇ ಎಚ್ಚೆತ್ತುಕೊಂಡು, ಈ ಗ್ಲಾಸ್ ಚೂರುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ತಂಗುದಾಣವನ್ನು ಸಾರ್ವಜನಿಕರ ಸುರಕ್ಷಿತ ಬಳಕೆಗೆ ಯೋಗ್ಯವಾಗಿಸಬೇಕು ಎಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ.

Share News