ಬೆಂಗಳೂರು: ಆಗಸ್ಟ್,18: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ನಡೆದ ಗುಂಡೇಟಿ ಮೂರು ಜನ ಅಮಾಯಕರು ಮೃತಪಟ್ಟಿದ್ದು, ಘಟನೆಯನ್ನು ಕ್ರೈಸ್ತ ಸಮುದಾಯವು ಖಂಡಿಸುವುದರ ಜೊತೆಗೆ ಈ ಮೂರು ಅಮಾಯಕರ ಪ್ರಾಣವನ್ನು ಬಲಿ ತೆಗೆದುಕೊಂಡವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆಯನ್ನು ನಡೆಸಬೇಕೆಂದು, SIT ಯನ್ನು ರಚಿಸಿದರೆ ಮಾತ್ರ ಸತ್ಯಾಂಶವು ಹೊರಗಡೆ ಬರುವುದು ಎಂದು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರು ಮಾನ್ಯ ಮುಖ್ಯಮಂತ್ರಿಗಳಿಗೆ ಮನವವರಿಕೆ ಮಾಡಿದರು.

ಭೇಟೆಯಾಡಲು ಹೊರಟಿದ್ದರು ಎಂದು ಸ್ಥಳೀಯರು ಹೇಳಿರುವುದು ಸುಳ್ಳು ವಿಚಾರವಾಗಿದ್ದು ಕಾಡಿನಲ್ಲಿ ದನಕರುಗಳನ್ನು ಮತ್ತು ಮೇಕೆಗಳನ್ನು ಹುಡುಕಲು ಹೋಗಿದ್ದ ಸಂದರ್ಭದಲ್ಲಿ ಹುಡುಕಾಡಿ ಬಂದು ಅಯಾಸಗೊಂಡು ಮಲಗಿದ್ದಂತಹ ಸಂದರ್ಭದಲ್ಲಿ ನಾಲ್ಕು ಜನ ಅಮಾಯಕರ ಮೇಲೆ ಏಕಾಎಕಿಯಾಗಿ ಗುಂಡು ಹಾರಿಸಿ ತಮ್ಮ ಶೌರ್ಯವನ್ನು ಮೆರೆದಂತಹ ಅರಣ್ಯ ಇಲಾಖೆಯ ವಿರುದ್ದ ಅರಣ್ಯ ಇಲಾಖಾಧಿಕಾರಿಗಳ ಮೇಲೆ ಕ್ರಮ ಅಗಲೇ ಬೇಕು ಎಂದು ಮುಖ್ಯಮಂತ್ರಿಗಳಿಗೆ ಐವನ್ ಡಿʼಸೋಜಾರವರು ಮನವಿ ಮಾಡಿದರು.ಘಟನೆಯ ಬಗ್ಗೆ ಸಮಗ್ರ, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಒತ್ತಾಯಿಸಿದರು.
ಘಟನೆಯಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೂ ಕನಿಷ್ಠ ₹1 ಕೋಟಿ ಪರಿಹಾರ ನೀಡಬೇಕು. ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವು. ಅಲ್ಲದೆ, ಇಂತಹ ಘಟನೆಗಳಲ್ಲಿ ಬೇರೆ ಸಂದರ್ಭಗಳಲ್ಲಿ ಪರಿಹಾರ ನೀಡಿದಂತೆ ಈ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಈ ಕುಟುಂಬದ ಮಕ್ಕಳಿಗೆ ಉದ್ಯೋಗವನ್ನು ನೀಡಬೇಕು ಹಾಗೂ ಮೃತರ ಚಿಕ್ಕ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಹಾಗೂ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಐವನ್ ಡಿʼಸೋಜಾರವರು ಎಂದು ಒತ್ತಾಯಿಸಿದರು. ಈ ನಿಯೋಗವು ಅರಣ್ಯ ಸಚಿವರಾದ ರಾಮಲಿಂಗಾರೆಡ್ಡಿಯನ್ನು ಭೇಟಿ ಮಾಡಿ ಅವರಿಗೂ ಮನವಿಯನ್ನು ಸಲ್ಲಿಸಲಾಯಿತು.

ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಪ್ರಕರಣದ ಕುರಿತು ಸಂಪೂರ್ಣ ತನಿಖೆ ನಡೆಸಿ, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಂತ್ರಸ್ತ ಕುಟುಂಬಗಳ ನೋವಿಗೆ ಸ್ಪಂದಿಸಿ, ಅವರಿಗೆ ಶಾಶ್ವತ ನೆರವು ಮತ್ತು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಯವರು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.


