ಮಂಗಳೂರು: ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ (ಕೆಎನ್‌ಎಸ್‌ಎಸ್) ಮಂಗಳೂರು ಕರಯೋಗಂ ವತಿಯಿಂದ ಓಣಂ ಹಬ್ಬವನ್ನು ಕೊಡಿಯಾಲ್‌ಬೈಲ್‌ನ ಕೂಟಕ್ಕಲ್ ಭಗವತಿ ಆಡಿಟೋರಿಯಂನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕೆಎನ್‌ಎಸ್‌ಎಸ್ ಮಂಗಳೂರು ಕರಯೋಗಂ ಅಧ್ಯಕ್ಷ ಮುರಳಿ ನಾಯರ್ ಹೊಸಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ವಿ.ಎಂ. ಸತೀಶನ್ ಸ್ವಾಗತಿಸಿದರು.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಖ್ಯಾತ ವಾಗ್ಮಿ ರಾಧಾಕೃಷ್ಣನ್ ಮಣಿಕೋತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾತನಾಡಿದ ಅವರು, ಹಿಂದೂ ಸಮಾಜ ಹಾಗೂ ಭಾರತೀಯ ಸಂಸ್ಕೃತಿಯ ಉತ್ತೇಜನದಲ್ಲಿ ನಾಯರ್ ಸಮುದಾಯದ ಕೊಡುಗೆಯನ್ನು ಶ್ಲಾಘಿಸಿದರು. ಇಂದಿನ ಸಮಾಜದಲ್ಲಿ ಕುಟುಂಬ ಮೌಲ್ಯಗಳಿಗೆ ಆದ್ಯತೆ ನೀಡುವ ಅಗತ್ಯವನ್ನು ಅವರು ಒತ್ತಿಹೇಳಿದರು. ಮಂಗಳೂರು ವಿಭಾಗದ ಕೆಎನ್‌ಎಸ್‌ಎಸ್ ಚಟುವಟಿಕೆಗಳು ಹಾಗೂ ಸ್ಥಳೀಯ ಸಮುದಾಯದೊಂದಿಗೆ ಹೊಂದಿರುವ ಉತ್ತಮ ಬಾಂಧವ್ಯವನ್ನು ಅವರು ಪ್ರಶಂಸಿಸಿದರು.

ಅಧ್ಯಕ್ಷ ಮುರಳಿ ನಾಯರ್ ಹೊಸಮಜಲು ಮಾತನಾಡಿ, ಕೆಎನ್‌ಎಸ್‌ಎಸ್ ಆಯೋಜಿಸಿರುವ ಓಣಂ ಆಚರಣೆಯು ಮಂಗಳೂರಿನ ವಿವಿಧ ಮಲಯಾಳಿ ಸಂಘಟನೆಗಳು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳನ್ನು ಒಗ್ಗೂಡಿಸುವ ವೇದಿಕೆಯಾಗಿದೆ ಎಂದರು. ಜಾತಿ, ಧರ್ಮ, ರಾಜಕೀಯ ಹಾಗೂ ಭಾಷೆಯ ಭೇದವಿಲ್ಲದೆ ಸಾಮರಸ್ಯ, ಏಕತೆ ಮತ್ತು ಪರಸ್ಪರ ಗೌರವದಿಂದ ಬದುಕುವ ಸಂದೇಶವನ್ನು ಓಣಂ ಸಾರುತ್ತದೆ ಎಂದು ಹೇಳಿದರು. ಮಂಗಳೂರು, ಕರ್ನಾಟಕ ಹಾಗೂ ದೇಶದ ಅಭಿವೃದ್ಧಿಯಲ್ಲಿ ನಾಯರ್ ಸಮುದಾಯದ ಕೊಡುಗೆಯನ್ನು ಅವರು ಸ್ಮರಿಸಿದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಯೂನಿಯನ್ ಬ್ಯಾಂಕ್ ಜನರಲ್ ಮ್ಯಾನೇಜರ್ ಹಾಗೂ ವಲಯ ಮುಖ್ಯಸ್ಥ ಸತ್ಯನ್ ಪಾಲುಗುಳು, ಡಿಜಿಎಂ ಹಾಗೂ ಪ್ರಾದೇಶಿಕ ಮುಖ್ಯಸ್ಥೆ ತೇಜಸ್ವಿನಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ಸಂಘದ ಸದಸ್ಯರು ಹಾಗೂ ಮಂಗಳೂರಿನ ಇಂಡಿಯನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಏವಿಯೇಷನ್ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಯರ್ ಸಮುದಾಯದ ಸದಸ್ಯರು, ಕುಟುಂಬಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಾಂಪ್ರದಾಯಿಕ ಕೇರಳ ಶೈಲಿಯ ಓಣಂ ಸದ್ಯವನ್ನು ಅತಿಥಿಗಳು ಹಾಗೂ ಸದಸ್ಯರಿಗೆ ಬಡಿಸಲಾಯಿತು. ಓಣಂನ ಪ್ರಮುಖ ಆಕರ್ಷಣೆಯಾದ ಮಹಾಬಲಿ ವೇಷಧಾರಿಗಳ ಉಪಸ್ಥಿತಿ ಹಾಗೂ ಸುಂದರವಾದ ಪೂಕ್ಕಳಂ ಗಮನ ಸೆಳೆಯಿತು. ಸಮುದಾಯದ ಸದಸ್ಯರಿಗಾಗಿ ಮಡಕೆ ಒಡೆಯುವ ಸ್ಪರ್ಧೆ ಹಾಗೂ ಹಗ್ಗಜಗ್ಗಾಟ ಸೇರಿದಂತೆ ಸಾಂಪ್ರದಾಯಿಕ ಓಣಂ ಆಟಗಳನ್ನು ಆಯೋಜಿಸಲಾಗಿತ್ತು.

ಖಜಾಂಚಿ ಅಜಯ್ ಕುಮಾರ್ ವಂದಿಸಿದರು. ನವ್ಯಾ ಕುರುಪ್, ಸಿಂಧು, ಗ್ರೀಷ್ಮಾ ಹಾಗೂ ಶ್ರೀಜಾ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.





