LATEST NEWS

ವೀರ ಯೋಧ ಚಂದ್ರಶೇಖರ ಪೂಜಾರಿ ಅವರಿಗೆ ಸೆ. 13ರಂದು ಪೆರುವಾಯಿ ಹುಟ್ಟೂರಲ್ಲಿ ಬೃಹತ್ ಸ್ವಾಗತ, ಅಭಿನಂದನೆ

ವಿಟ್ಲ: ಭಾರತೀಯ ಸೇನೆಯಲ್ಲಿ ಸುದೀರ್ಘ 23 ವರ್ಷಗಳ ಕಾಲ ದೇಶದ ಗಡಿ ಹಾಗೂ ತಾಯ್ನಾಡಿನ ರಕ್ಷಣೆಗಾಗಿ ನಿಷ್ಠೆ, ಶಿಸ್ತು ಮತ್ತು ಸಮರ್ಪಣಾ ಮನೋಭಾವದಿಂದ ಅಮೂಲ್ಯ ಸೇವೆ ಸಲ್ಲಿಸಿ, ಸೇವಾ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳುತ್ತಿರುವ ಪೆರುವಾಯಿ ಗ್ರಾಮದ ಕಲ್ಲಡ್ಕ ನಿವಾಸಿ, ಹೆಮ್ಮೆಯ ವೀರ ಯೋಧ ಶ್ರೀ ಚಂದ್ರಶೇಖರ ಪೂಜಾರಿ ಅವರಿಗೆ ಹುಟ್ಟೂರಲ್ಲಿ ಬೃಹತ್ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಿಶ್ವ ಹಿಂದೂ ಪರಿಷತ್ – ಬಜರಂಗದಳ ಶ್ರೀ ಕೃಷ್ಣ ಶಾಖೆ, ಪೆರುವಾಯಿ ಮತ್ತು ಗ್ರಾಮದ ಸಮಸ್ತ ದೇಶಭಕ್ತರ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 13ರ ಭಾನುವಾರ ಸಂಜೆ 4:00 ಗಂಟೆಗೆ ವೀರ ಯೋಧನಿಗೆ ಹೃದಯಪೂರ್ವಕ ಸ್ವಾಗತ ಹಾಗೂ ಗೌರವಪೂರ್ವಕ ಅಭಿನಂದನೆ ಸಲ್ಲಿಸಲು ಬೃಹತ್ ವಾಹನ ಜಾಥಾವನ್ನು ಆಯೋಜಿಸಲಾಗಿದೆ.

ಎರಡು ಬಾರಿ ಪ್ರಶಂಸಾ ಪತ್ರದ ಗೌರವ:ಯೋಧ ಶ್ರೀ ಚಂದ್ರಶೇಖರ ಪೂಜಾರಿ ಅವರು ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಉತ್ಕೃಷ್ಟ ಹಾಗೂ ಅಮೋಘ ಸೇವೆಗಾಗಿ ಎರಡು ಬಾರಿ ಸೇನಾ ಹಿರಿಯ ಅಧಿಕಾರಿಗಳ ಪ್ರಶಂಸಾ ಪತ್ರಕ್ಕೆ ಭಾಜನರಾಗಿದ್ದಾರೆ. ಇಂತಹ ಸಾಧಕ ಯೋಧನಿಗೆ ಗೌರವ ಸಲ್ಲಿಸುವುದು ಇಡೀ ಊರಿಗೆ ಹೆಮ್ಮೆಯ ಸಂಗತಿಯಾಗಿದೆ.

ಕುದ್ದುಪದವಿನಿಂದ ಕಲ್ಲಡ್ಕದವರೆಗೆ ಬೃಹತ್ ವಾಹನ ಜಾಥಾ:ಭಾನುವಾರ ಸಂಜೆ 4:00 ಗಂಟೆಗೆ ಸರಿಯಾಗಿ ಕುದ್ದುಪದವಿನಿಂದ ಬೃಹತ್ ವಾಹನ ಜಾಥಾ ಪ್ರಾರಂಭವಾಗಲಿದೆ. ಅಲ್ಲಿಂದ ಹೊರಡುವ ಜಾಥಾವು ಪೆರುವಾಯಿ ಜಂಕ್ಷನ್ ಮೂಲಕ ಸಾಗಿ, ಪೆರುವಾಯಿ ಗ್ರಾಮದ ಕಲ್ಲಡ್ಕದಲ್ಲಿರುವ ಯೋಧ ಶ್ರೀ ಚಂದ್ರಶೇಖರ ಪೂಜಾರಿ ಅವರ ನಿವಾಸದವರೆಗೆ ಸಾಗಲಿದೆ. ನಂತರ ಅಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ತಮ್ಮ ಬದುಕಿನ ಅಮೂಲ್ಯ ಸುದೀರ್ಘ ಅವಧಿಯನ್ನು ದೇಶದ ಗಡಿ ಕಾಯುವ ಕಠಿಣ ಸೇವೆಗೆ ಮುಡುಪಾಗಿಟ್ಟು, ಪ್ರಶಂಸಾ ಪತ್ರಗಳ ಗೌರವ ದೊಂದಿಗೆ ತಾಯ್ನಾಡಿಗೆ ಮರಳುತ್ತಿರುವ ಯೋಧನಿಗೆ ಗೌರವಪೂರ್ವಕ ಸ್ವಾಗತ ಕೋರಲು ಸಮಸ್ತ ದೇಶಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳೊಂದಿಗೆ ಈ ಜಾಥಾದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Share News