LATEST NEWS

ಗೋಹತ್ಯೆ ನಿಷೇಧ ಹಾಗೂ ಗೋವನ್ನು ರಾಷ್ಟ್ರಮಾತೆ ಎಂದು ಘೋಷಿಸಲು ಆಗ್ರಹ: ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ಮಂಗಳೂರು: ದೇಶದಲ್ಲಿ ಸಂಪೂರ್ಣವಾಗಿ ಗೋಹತ್ಯೆಯನ್ನು ನಿಷೇಧಿಸಬೇಕು ಮತ್ತು ಗೋವನ್ನು ‘ರಾಷ್ಟ್ರಮಾತೆ’ ಎಂದು ಅಧಿಕೃತವಾಗಿ ಘೋಷಿಸಬೇಕು ಎಂದು ಆಗ್ರಹಿಸಿ ದೇಶಾದ್ಯಂತ ಬೃಹತ್ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ, ಮಂಗಳೂರಿನ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಚೇರಿಯಲ್ಲಿ ಅಭಿಯಾನದ ನೂತನ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು.

ಕಚೇರಿಯಲ್ಲಿ ವಿಶೇಷ ಗೋಪೂಜೆ ನೆರವೇರಿಸುವ ಮೂಲಕ ಈ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿ, ನಂತರ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಪ್ರಸಕ್ತ ಅಭಿಯಾನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಒಟ್ಟು 10 ಲಕ್ಷ ಸಹಿಗಳನ್ನು ಸಂಗ್ರಹಿಸುವ ಬೃಹತ್ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರಿಂದ ಸಂಗ್ರಹಿಸಲಾಗುವ ಈ ಎಲ್ಲಾ ಸಹಿ ಪತ್ರಗಳನ್ನು ಮುಂಬರುವ ಡಿಸೆಂಬರ್ 17 ರಂದು ಬೆಂಗಳೂರಿನಲ್ಲಿ ಮಾನ್ಯ ರಾಜ್ಯಪಾಲರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಗೋಸಂರಕ್ಷಣೆಗಾಗಿ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಲು ಒತ್ತಾಯಿಸಲಾಗುವುದು ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್, ಅಭಿಯಾನದ ಜಿಲ್ಲಾ ಪ್ರಭಾರಿ ಹಾಗೂ ವಿಎಚ್‌ಪಿ ವಿಭಾಗ ಕಾರ್ಯದರ್ಶಿ ಶಿವಾನಂದ ಮಂಡನ್, ಸಹ ಪ್ರಭಾರಿಗಳಾದ ಅಶೋಕ್ ಇಳಂತಿಲ ಮತ್ತು ಶ್ರೀಮತಿ ಶಾಂಭವಿ ಉಪಸ್ಥಿತರಿದ್ದರು. ಇವರೊಂದಿಗೆ ಗೋಸೇವಾ ಗತಿವಿಧಿಯ ರಮೇಶ್ ಭಟ್, ಪೂಜ್ಯ ಶ್ರೀ ಶ್ರೀ ದುರ್ಗಾನಂದ ಸ್ವಾಮೀಜಿ, ಎಚ್. ಕೆ. ಪುರುಷೋತ್ತಮ್, ಗಜೇಂದ್ರ, ರಮೇಶ್ ಭಟ್, ಗೋಪಾಲ್ ಕುತ್ತಾರ್ ಹಾಗೂ ಭರತ್ ಮಂಜನಾಡಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

Share News