ಮಂಗಳೂರು: ನಗರ ಹೊರವಲಯದ ಉಳ್ಳಾಲದ ಕಲ್ಲಾಪು ನಿರ್ಜನ ಪ್ರದೇಶದಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಪತ್ತೆಯಾದ ಅಂತರರಾಜ್ಯ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಪ್ರಭುರಾಜ್ ಹಾಗೂ ಮಿಥುನ್
ಬಂಧಿತರನ್ನು ಮುಲ್ಕಿ ಮೂಲದ ಆಟೋ ಚಾಲಕ ಪ್ರಭುರಾಜ್(38), ಮಣಿ ಮತ್ತು ಕುಂಪಲದ ಮಿಥುನ್(30) ಬಂಧಿತ ಆರೋಪಿಗಳು.
ಇವರು ಮೂವರು ಸ್ನೇಹಿತರಾಗಿದ್ದು, ಮೂಲ್ಕಿ ಮೂಲದ ಪ್ರಭುರಾಜ್ ಆಟೋ ಚಾಲಕನಾಗಿದ್ದು, ಉಳ್ಳಾಲ ಕುಂಪಲದ ಮಿಥುನ್ ಎಲೆಕ್ಟ್ರೀಷಿಯನ್ ಆಗಿ ವೃತ್ತಿ ನಿರ್ವಹಿಸುತ್ತಿದ್ದನು.
ಘಟನೆ ವಿವರ
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ “ಏ.16 ರಂದು ರಾತ್ರಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1.30ರ ಸುಮಾರಿಗೆ 112ಗೆ ಯುವತಿಯೊಬ್ಬಳು ಕೂಗಾಡುತ್ತಿದ್ದಾಳೆ, ಆಕೆಗೆ ಹಲ್ಲೆ ಮಾಡಿದ್ದಾರೆ ಎಂದು ಕರೆ ಬಂದಿತ್ತು. ತಕ್ಷಣ ನಮ್ಮ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಯುವತಿಯನ್ನು ಆಸ್ಪತ್ರೆಗೆ ಕರೆತಂದಿದ್ದಾರೆ.
ಯುವತಿ ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಹೇಳಿಕೆ ಪ್ರಕಾರ ಬುಧವಾರ ರಾತ್ರಿ ಯಾರೋ ಅವರಿಗೆ ಮದ್ಯಪಾನ ಮಾಡಿಸಿದ್ದಾರೆ. ಕಾರಿನಲ್ಲಿ ಮೂವರು ಇದ್ದಿದ್ದಾಗಿ ಯುವತಿ ಹೇಳಿಕೆ ನೀಡಿದ್ದಾರೆ.
ಪ್ರಾಥಮಿಕ ವಿಚಾರಣೆ ವೇಳೆ ತನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದೆ ಎಂಬ ಯುವತಿ ಹೇಳಿಕೆ ನೀಡಿದ್ದಾರೆ. ಆದರೆ, ವೈದ್ಯಕೀಯ ವರದಿ ಬಂದ ಬಳಿಕ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದೆಯೋ ಅಥವಾ ಇಲ್ಲವೋ ಎಂಬುವುದು ತಿಳಿಯಲಿದೆ. ಮಂಗಳೂರಿನಲ್ಲಿ ಪರಿಚಯವಾದ ಆಟೋ ಚಾಲಕ ಮತ್ತು ಆತನ ಸ್ನೇಹಿತರು ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ಪೊಲೀಸರ ಮುಂದೆ ಹೇಳಿದ್ದಾರೆ. ಪ್ರಕರಣದ ತನಿಖೆಯನ್ನು ಉಳ್ಳಾಲ ಪೊಲೀಸರು ಮುಂದುವರೆಸಿದ್ದಾರೆ.
ಮೊಬೈಲ್ ರಿಪೇರಿ ವೇಳೆ ಸ್ನೇಹಾಂಕುರ
ಪಶ್ಚಿಮ ಬಂಗಾಳ ಮೂಲದ ಯುವತಿ ಕೇರಳದಲ್ಲಿ ಫ್ಲೈವುಡ್ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಮಂಗಳೂರಿನಲ್ಲಿ ಹೊಸ ಕೆಲಸವೊಂದಕ್ಕೆ ಅರ್ಜಿ ಹಾಕಿದ್ದಳು. ಈ ಹಿನ್ನೆಲೆ ಇಂಟರ್‌ವ್ಯೂಗೆಂದು ನಿನ್ನೆ ಬೆಳಗ್ಗೆ ತನ್ನ ಸ್ನೇಹಿತನೊಂದಿಗೆ ಮಂಗಳೂರಿಗೆ ಬಂದಿದ್ದಾಳೆ. ಈ ವೇಳೆ ಇವರಿಬ್ಬರ ಮಧ್ಯೆ ಜಗಳ ಉಂಟಾಗಿದೆ. ಆಗ ಆ ಸ್ನೇಹಿತ ಈಕೆಯ ಮೊಬೈಲ್ ಅನ್ನು ಪುಡಿ ಪುಡಿ ಮಾಡಿ ಅಲ್ಲಿಂದ ತೆರಳಿದ್ದಾನೆ.
ಆಗ ಮೊಬೈಲ್ ಸರಿಪಡಿಸಲೆಂದು ಆಟೋ ಡ್ರೈವರ್ ಪ್ರಭುರಾಜ್ ಸಹಾಯ ಪಡೆದಿದ್ದಾಳೆ. ಅದರಂತೆ ನಗರದ ಆಕೆಯನ್ನು ರಿಪೇರಿಗೆಂದು ಮೊಬೈಲ್ ಅಂಗಡಿಗೆ ಕರೆದುಕೊಂಡು ಹೋಗಿದ್ದನು. ಈ ಕೆಲವೇ ಗಂಟೆಗಳಲ್ಲಿ ಇವರಿಬ್ಬರ ಮಧ್ಯೆ ಸ್ನೇಹ ಶುರುವಾಗಿದೆ. ಮೊಬೈಲ್ ರಿಪೇರಿಯ ಹಣವನ್ನುಯುವತಿಯ ಸಂಬಂಧಿಕರು ಆಟೋ ಡ್ರೈವರ್‌ನ ಮೊಬೈಲ್‌ಗೆ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದಾರೆ. ಇದೇ ವೇಳೆ ರಾತ್ರಿ 8:30 ಗೆ ತಾನು ಊರಿಗೆ ಮರಳುತ್ತೇನೆ ಎಂದು ಹೇಳಿಕೊಂಡಿದ್ದು, ತನ್ನನ್ನು ಕಂಕನಾಡಿಯ ರೈಲ್ವೇ ನಿಲ್ದಾಣಕ್ಕೆ ಬಿಡುವಂತೆ ಕೇಳಿಕೊಂಡಿದ್ದಾಳೆ.
ಅದರಂತೆ ಪ್ರಭು ಆಟೋದಲ್ಲಿ ಕಂಕನಾಡಿ ಕಡೆ ಹೊರಟಿದ್ದು, ಈ ವೇಳೆ ಆತನ ಜೊತೆ ಇನ್ನಿಬ್ಬರು ಸ್ನೇಹಿತರಾದ ಮಣಿ ಮತ್ತು ಮಿಥುನ್ ಸೇರಿಕೊಂಡಿದ್ದು, ದಾರಿ ಮಧ್ಯೆ ಬಾರ್‌ವೊಂದರಲ್ಲಿ ಮದ್ಯಸೇವನೆ ಮಾಡಿ, ಯುವತಿಗೂ ಕುಡಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ನಂತರ ಆಕೆ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.