LATEST NEWS

“ನೈಜ ಜನಸೇವಕನಾಗಿ ಮಾದರಿ ರಾಜಕಾರಣಿಯಾಗಿ ಬೆಳೆಯುತ್ತಿರುವ ಶಾಸಕ ಅಶೋಕ್ ರೈ” – ಬಿ.ಕೆ. ಹರಿಪ್ರಸಾದ್ ಶ್ಲಾಘನೆ

ಪುತ್ತೂರು: “ಇಂದು ರಾಜಕಾರಣವನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಆದರೆ, ರಾಜಕಾರಣ ಇರುವುದು ಜನಸಾಮಾನ್ಯರ ಸೇವೆಗಾಗಿಯೇ ಹೊರತು ಸ್ವಂತ ಜೀವನಕ್ಕಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆಗಾಗಿ ಅಧಿಕಾರ ಬಳಕೆಯಾಗಬೇಕು. ಪುತ್ತೂರು ಶಾಸಕ ಅಶೋಕ್ ರೈ ಅವರು ನೈಜ ಜನಸೇವಕನಾಗಿ ಕೆಲಸ ಮಾಡುವ ಮೂಲಕ ಮಾದರಿ ರಾಜಕಾರಣಿಯಾಗಿ ಬೆಳೆಯುತ್ತಿದ್ದಾರೆ” ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಅಶೋಕ್ ರೈ ಸಾರಥ್ಯದ ‘ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್’ ನೇತೃತ್ವದಲ್ಲಿ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 14ನೇ ವರ್ಷದ ‘ಅಶೋಕ ಜನಮನ-2026’ ಸಮಾವೇಶ ಹಾಗೂ ದೀಪಾವಳಿ ಪ್ರಯುಕ್ತ ವಸ್ತ್ರ ಮತ್ತು ಉಡುಗೊರೆ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

“ರಾಜ್ಯದ ಯಾವೊಬ್ಬ ಶಾಸಕರೂ ಮಾಡದ ಅಭೂತಪೂರ್ವ ಜನಪರ ಕಾರ್ಯಕ್ರಮವನ್ನು ಅಶೋಕ್ ರೈ ಆಯೋಜಿಸುತ್ತಿದ್ದಾರೆ. ಹೆತ್ತ ತಂದೆ-ತಾಯಿಗೆ ಗೌರವ ತರುವ ಕೆಲಸ ಮಾಡುತ್ತಿದ್ದಾರೆ. ಒಮ್ಮೆ ಶಾಸಕರಾದವರು ಕ್ಷೇತ್ರದ ಎಲ್ಲರಿಗೂ ಶಾಸಕರಾಗಿರುತ್ತಾರೆ. ಎಲ್ಲರನ್ನೂ ಸಮಾನರಾಗಿ ಕಾಣುವುದೇ ಕಾಂಗ್ರೆಸ್ ಸಿದ್ಧಾಂತ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಗೆ ದೊಡ್ಡ ಕೊಡುಗೆ ನೀಡಿದ ದಿ. ಸುಬ್ಬಯ್ಯ ಶೆಟ್ಟಿ ಹಾಗೂ ದಿ. ಸುಂದರ್‌ರಾಂ ಶೆಟ್ಟಿ ಅವರ ಮಾದರಿಯಲ್ಲಿ ಅಶೋಕ್ ರೈ ಸಾಗುತ್ತಿದ್ದಾರೆ” ಎಂದು ಶ್ಲಾಘಿಸಿದರು.

ತುಳು ಸೇರ್ಪಡೆ, ಮಹಿಳಾ ಮೀಸಲಾತಿಗೆ ಧ್ವನಿಯಾಗಲಿ:

“ಶಿಕ್ಷಣವು ಸಮಾಜದ ಸಬಲೀಕರಣಕ್ಕೆ ಕಾರಣವಾಗುತ್ತದೆ ಎಂದು ಮನಗಂಡು ಶಿಕ್ಷಣಕ್ಕೆ ಒತ್ತು ಕೊಟ್ಟ ಜಿಲ್ಲೆ ದಕ್ಷಿಣ ಕನ್ನಡ. ಪ್ರತಿಭೆ ಮತ್ತು ಸಾಮರ್ಥ್ಯ ಎಲ್ಲರ ಸೊತ್ತು. ನಮ್ಮ ಸಂಸದರು ಮತ್ತು ಶಾಸಕರು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರದ ಮೇಲೆ ಒತ್ತಾಯ ಹೇರಬೇಕು. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಲು ಹಿಂದೆ ಪ್ರಯತ್ನಪಟ್ಟರೂ ಲೋಕಸಭೆಯಲ್ಲಿ ಪೂರ್ಣಪ್ರಮಾಣದಲ್ಲಿ ಜಾರಿಯಾಗಿಲ್ಲ. ಈ ಬಗ್ಗೆ ವಿಧಾನಸಭೆಯಲ್ಲೂ ಧ್ವನಿ ಎತ್ತಬೇಕು” ಎಂದು ಹರಿಪ್ರಸಾದ್ ಹೇಳಿದರು.

ಸತ್ಕರ್ಮದಿಂದ ಸಫಲತೆ – ಮಾಣಿಲ ಶ್ರೀ:

ಆಶೀರ್ವಚನ ನೀಡಿದ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, “ಸತ್ಕರ್ಮವು ಸದಾ ಸಫಲತೆಯನ್ನು ನೀಡುತ್ತದೆ. ದೀನರು ಹಾಗೂ ಆರ್ತರ ಸೇವೆಯೇ ಬಹುಮುಖ್ಯ. ಸಮಾಜದಲ್ಲಿ ಸಂಘರ್ಷವನ್ನು ದೂರ ಮಾಡಿದಾಗ ಮಾತ್ರ ಪ್ರಗತಿಯ ಪಥ ಗೋಚರಿಸುತ್ತದೆ” ಎಂದರು.

ಬೆಂಚ್‌ಮಾರ್ಕ್ ಅಭಿವೃದ್ಧಿಯೇ ನನ್ನ ಗುರಿ – ಶಾಸಕ ಅಶೋಕ್ ರೈ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಅಶೋಕ್ ರೈ, “ಪುತ್ತೂರಿನಲ್ಲಿ ಬೆಂಚ್‌ಮಾರ್ಕ್ (ಮಾದರಿ) ಅಭಿವೃದ್ಧಿಯಾಗಬೇಕು ಎನ್ನುವುದೇ ನನ್ನ ಗುರಿ. ಕ್ಷೇತ್ರದಲ್ಲಿ 1,006 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ, ಸುಸಜ್ಜಿತ ಆರ್‌ಟಿಒ ಟ್ರ್ಯಾಕ್, ಆಧುನಿಕ ಕ್ರೀಡಾಂಗಣ, ವೈದ್ಯಕೀಯ ಕಾಲೇಜು ಮೊದಲಾದ ಬೃಹತ್ ಯೋಜನೆಗಳು ಸಾಕಾರಗೊಳ್ಳುತ್ತಿವೆ. ವಿದ್ಯೆ, ಉದ್ಯೋಗ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕ್ಷೇತ್ರಕ್ಕೆ ಸುಮಾರು 3 ಸಾವಿರ ಕೋಟಿ ರೂ. ಅನುದಾನ ತಂದಿರುವುದಕ್ಕೆ ದಾಖಲೆಗಳಿವೆ. ನಾನು ಕೆಲಸ ಮಾಡಿದ್ದರೆ ಮುಂದೆಯೂ ನಿಮ್ಮ ಆಶೀರ್ವಾದವಿರಲಿ” ಎಂದು ವಿನಂತಿಸಿದರು.

ಗ್ರಾಮೀಣ ಸಾಧಕರಿಗೆ ಸನ್ಮಾನ:

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗ್ರಾಮೀಣ ಮಟ್ಟದ ಸಾಧಕರಾದ ಸುಬ್ಬಣ್ಣ ಪಂಡಿತ, ಫಝಲ್ ಹಕ್ ಬಪ್ಪಳಿಗೆ, ಗೀತಾ ದೇವಸ್ಯ, ಝುಬೈರಾ ಅಹ್ಮದ್, ಮಹಾಬಲ ಶೆಟ್ಟಿ, ಮಹಮ್ಮದ್ ಅಲಿ ಗೋಳಿಕಟ್ಟೆ, ಜಗನ್ನಾಥ ರೈ, ಅಬ್ದುಲ್ ಖಾದರ್ ಕಲ್ಲಂದಡ್ಕ, ಸದಾಶಿವ ರೈ ಕಲ್ಲರ್ಪೆ ಮತ್ತು ಸುಶೀಲ ದಿನೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಯಿಯಿಂದ ಕಾರ್ಯಕ್ರಮ ಉದ್ಘಾಟನೆ:

ಬೆಳಗ್ಗೆ ನಡೆದ ಧಾರ್ಮಿಕ ಪೂಜಾ ವಿಧಿವಿಧಾನಗಳ ಬಳಿಕ ಶಾಸಕ ಅಶೋಕ್ ರೈ ಅವರ ತಾಯಿ ಗಿರಿಜಾ ಎಸ್. ರೈ ಅವರು ದೀಪ ಬೆಳಗಿಸುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು. ರಾಜ್ ಕುಮಾರ್ ರೈ, ಸವಣೂರು ಕೆ. ಸೀತಾರಾಮ ರೈ, ರಾಧಾಕೃಷ್ಣ ನಾಯ್ಕ್, ಮುರಳೀಧರ್ ರೈ ಮಠಂತಬೆಟ್ಟು ಸೇರಿದಂತೆ ಅಶೋಕ್ ರೈ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಧರ್ಮಗುರು ಫಾ. ಜೆ.ಬಿ. ಸಲ್ದಾನ, ಮುಸ್ಲಿಂ ಧಾರ್ಮಿಕ ಮುಖಂಡ ಮಹ್ರೂಫ್ ಸುಲ್ತಾನ್ ಆಶೀರ್ವಚನ ನೀಡಿದರು.

ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕಿ ಸುಮಾ ಅಶೋಕ್ ರೈ, ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಆರ್. ಶೆಟ್ಟಿ, ಸದಸ್ಯ ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಸಂಯೋಜಕ ಹೇಮನಾಥ ಶೆಟ್ಟಿ ಕಾವು, ತುಳು ಅಕಾಡೆಮಿ ಮಾಜಿ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ, ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ನಗರ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ ಎಚ್., ಕೆಪಿಸಿಸಿ ಸದಸ್ಯ ಪ್ರಸಾದ್ ಕೌಶಲ್ ಶೆಟ್ಟಿ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಅಳಿಕೆ, ಮಾಜಿ ಅಧ್ಯಕ್ಷರಾದ ಮುರಳೀಧರ ರೈ ಮಠಂತಬೆಟ್ಟು, ಡಾ. ರಾಜಾರಾಂ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜ, ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಶಿವನಾಥ ರೈ ಮೇಗಿನಗುತ್ತು, ವಿಜಯ ಕುಮಾರ್ ಸೊರಕೆ, ಬೇಬಿ ಕುಂದರ್, ಶಶಿಧರ್ ಹೆಗ್ಡೆ, ಎಂ.ಬಿ. ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

Share News