COMMUNITY NEWSDAKSHINA KANNADAHOMELATEST NEWSSTATE

ಕಾವೇರಿ ವನ್ಯಧಾಮ ಗುಂಡಿನ ದಾಳಿ ತನಿಖೆಗೆ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ್ ಒತ್ತಾಯ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಅಮಾಯಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕ್ರೈಸ್ತ ಸಮುದಾಯವು ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನೊಂದ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿ ಕ್ರೈಸ್ತ ನಿಯೋಗವು ಕರ್ನಾಟಕ ಸರ್ಕಾರದ ಅರಣ್ಯ ಸಚಿವರಾದ ಮಾನ್ಯ ಶ್ರೀ ರಾಮಲಿಂಗ ರೆಡ್ಡಿ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿತು.

ಮಂಗಳೂರು ಧರ್ಮಪ್ರಾಂತ್ಯದ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ನಿಯೋಗವು
ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀಮಾನ್ ಐವನ್ ಡಿಸೋಜಾ ಅವರ ಮುಂದಾಳತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ನಿಯೋಗವು, ಘಟನೆಯ ಬಗ್ಗೆ ಸಮಗ್ರವಾದ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿತು.

ಗುಂಡಿನ ದಾಳಿಗೆ ಬಲಿಯಾದವರು ಅತ್ಯಂತ ಬಡತನದ ಹಿನ್ನೆಲೆಯುಳ್ಳವರಾಗಿದ್ದು, ತಮ್ಮ ಕುಟುಂಬದ ಏಕೈಕ ಆಧಾರವಾಗಿದ್ದರು. ಅವರ ಅಕಾಲಿಕ ಮರಣದಿಂದ ಇಡೀ ಕುಟುಂಬಗಳು ಬೀದಿಗೆ ಬಿದ್ದಂತಾಗಿದ್ದು, ಸರ್ಕಾರವು ಮಾನವೀಯತೆಯ ಆಧಾರದ ಮೇಲೆ ಮೃತರ ಕುಟುಂಬದವರಿಗೆ ತಕ್ಷಣವೇ ಸೂಕ್ತ ಪರಿಹಾರ ಧನವನ್ನು ಘೋಷಿಸಬೇಕು ಎಂದು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಕಳಕಳಿಯಿಂದ ವಿನಂತಿಸಲಾಯಿತು.

ಮನವಿ ಸ್ವೀಕರಿಸಿದ ಸಚಿವರು, ಘಟನೆಯ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕಾನೂನು ಚೌಕಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ್ ಇದರ ಅಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾ, ರಾಜಕೀಯ ಸಂಚಾಲಕರಾದ ಶ್ರೀ ಸ್ಟೇನಿ ಲೋಬೊ, ಉಪಾಧ್ಯಕ್ಷರಾದ ಶ್ರೀ ಸ್ಟೀವನ್ ರೋಡ್ರಿಗಸ್ ಹಾಗೂ ಶ್ರೀ ಅಲ್ಪೊನ್ಸ್ ಫೆರ್ನಾಂಡಿಸ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Share News