ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ ರಜೆ ಘೋಷಿಸುವಂತೆ ಮುಸ್ಲಿಂ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಹಾಗೂ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರವಾದಿ ಮುಹಮ್ಮದ್ ಮುಸ್ತಫಾ (ಸ) ರವರ ಜನ್ಮದಿನ “ ಈದ್ ಮಿಲಾದ್” ಕಾರ್ಯಕ್ರಮ ಪ್ರಯುಕ್ತ ಸರಕಾರಿ ಸಾರ್ವತ್ರಿಕ ರಜೆ ಆಗಸ್ಟ್ 26ರಂದು ನಿಗದಿಯಾಗಿ ರುತ್ತದೆ. ಆದರೆ, ಇಸ್ಲಾಮಿಕ್ ತಿಂಗಳ ಆರಂಭದ ಚಂದ್ರ ದರ್ಶನದಲ್ಲಿ ವ್ಯತ್ಯಾಸದ ಕಾರಣ ಆಗಸ್ಟ್ 25ರಂದು ಮೀಲಾದ್ ನಡೆಯಲಿದೆ ಎಂದು ಜಿಲ್ಲೆಯ ಎಲ್ಲಾ ಖಾಝಿ ಗಳು ನಿರ್ಧರಿಸಿರುತ್ತಾರೆ.
ಮೀಲಾದ್ ದಿನದಂದು ಜಿಲ್ಲೆಯ ಎಲ್ಲ ಮಸೀದಿ ವ್ಯಾಪ್ತಿಗಳಲ್ಲಿ ಮೆರವಣಿಗೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 25 ಮಂಗಳವಾರದಂದೇ ಈದ್ ಮಿಲಾದ್ ರಜೆ ನೀಡಿದರೆ ಮುಸ್ಲಿಂ ಸಮುದಾಯದವರಿಗೆ ಪ್ರಯೋಜನವಾಗಲಿದೆ.
ಆದುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 26 ರ ಈದ್ ಮಿಲಾದ್ ಸಾರ್ವತ್ರಿಕ ರಜೆಯನ್ನು ಬದಲಾಯಿಸಿ ಆಗಸ್ಟ್ 25 ಮಂಗಳವಾರ ದಂದು ಸಾರ್ವತ್ರಿಕ ರಜೆ ಎಂದು ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಕುರಿತು ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಬಿ ಎ ಅಬ್ದುಲ್ ನಾಸೀರ್ ಲಕಿಸ್ಟಾರ್, ಮಂಗಳೂರು ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಯೆನೆಪೋಯ ಅಬ್ದುಲ್ಲ ಕುನ್ಹಿ,ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಶರೀಫ್ ಅಧ್ಯಕ್ಷ ಹಾಜಿ ಜಿ ಹನೀಫ್ ಅವರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ಜಂಟಿ ಮನವಿ ಸಲ್ಲಿಸಿದ್ದಾರೆ.
