ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ (ಸ್ವಾಯತ್ತ), ರೋಶನಿ ನಿಲಯ ಕಾಲೇಜಿನಲ್ಲಿ ಆಟಿ ತಿಂಗಳಿಗೆ ಸಂಬಂಧಿಸಿದ ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸಲು ೨೦೨೬ರ ಆಗಸ್ಟ್ ೫ ರಂದು ಕಾಲೇಜು ಸಭಾಂಗಣದಲ್ಲಿ “ಆಟಿಡೊಂಜಿ ದಿನ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರೀಕ್ಷಾ ನಿಯಂತ್ರಕರಾದ ಡಾ. ಸಿಸಿಲಿಯಾ ಫರೀದಾ ಗೋವಿಯಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತುಳುನಾಡಿನ ಸಾಂಸ್ಕೃತಿಕ ಹಾಗೂ ಜಾನಪದ ವಿದ್ವಾಂಸರಾದ ಶ್ರೀ ಕೆ. ಕೆ. ಪೇಜಾವರ ಭಾಗವಹಿಸಿದ್ದರು. ಮುಖ್ಯ ಅತಿಥಿಗಳು ಹಿಂಗಾರ ಬಿಡಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆ ಬಳಿಕ ಮಾತನಾಡಿದ ಅವರು, ಆಟಿ ತಿಂಗಳ ಪ್ರಾಮುಖ್ಯತೆ, ಇಲ್ಲಿನ ಆಚಾರ-ವಿಚಾರಗಳು, ಈ ಋತುವಿನಲ್ಲಿ ಎದುರಾಗುವ ಸವಾಲುಗಳು ಮತ್ತು ಈ ಕಾಲಘಟ್ಟವು ಹೇಗೆ ವಿಶಿಷ್ಟ ಖಾದ್ಯಗಳು, ಜಾನಪದ ಆಟಗಳು ಹಾಗೂ ಸಾಹಿತ್ಯಕ್ಕೆ ಜನ್ಮ ನೀಡಿತು ಎಂಬುದನ್ನು ವಿವರವಾಗಿ ಹಂಚಿಕೊಂಡರು. ಅಲ್ಲದೇ ವೀಳ್ಯದೆಲೆಯ ಸಾಂಸ್ಕೃತಿಕ ನಂಬಿಕೆಗಳು, ಮದುವೆಯಾದ ಹೆಣ್ಣುಮಕ್ಕಳು ತವರು ಮನೆಗೆ ಭೇಟಿ ನೀಡುವ ಪದ್ಧತಿ, ಆಟಿ ಕಳೆಂಜ ಪರಂಪರೆ ಹಾಗೂ ಆಟಿ ತಿಂಗಳಲ್ಲಿ ಸೇವಿಸುವ ಕಷಾಯದ ಗಿಡಮೂಲಿಕೆಗಳ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಬೆಳಕು ಚೆಲ್ಲಿದರು. ಪದವಿ ವಿದ್ಯಾರ್ಥಿ ಶಂತನ್ ರೈ ಆಟಿ ಆಚರಣೆಯ ಕುರಿತು ಇಂಗ್ಲೀಷ್ ನಲ್ಲಿ ಭಾಷಣ ಮಾಡಿದರು.
ವೇದಿಕೆಯಲ್ಲಿ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಮೀನಾ ಮೊಂತೆರೊ, ಪದವಿ ವಿಭಾಗದ ಡೀನ್ ಡಾ. ಸ್ಯಾಂಡ್ರಾ ಲೋಬೋ , IQAC ಸಂಯೋಜಕಿ ಡಾ. ಸರಿತಾ ಡಿಸೋಜಾ, IQAC ಸಹ-ಸಂಯೋಜಕಿ ಡಾ. ರೋಸಾ, ಪದವಿ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಮಿಸ್ ಸಾರಿಕ್ ಅಂಕಿತಾ ಉಪಸ್ಥಿತರಿದ್ದರು.
ತುಳುನಾಡಿನ ಸಂಪ್ರದಾಯದಂತೆ ಗಣ್ಯರನ್ನು ವೀಳ್ಯದೆಲೆ ಮತ್ತು ಅಡಿಕೆಯೊಂದಿಗೆ ಸ್ವಾಗತಿಸಲಾಯಿತು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಪ್ರಾಧ್ಯಾಪಕ ಶ್ರೀಸಂದೀಪ್ ಉಳ್ಳಾಲ್ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಓಬನಾಥ್ ಅತಿಥಿ ಪರಿಚಯ ಮಾಡಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಕುಮಾರಿ ಹರ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು. IQAC ಸಂಯೋಜಕರಾದ ಡಾ. ಸರಿತಾ ಡಿಸೋಜಾ ಅವರು ಧನ್ಯವಾದ ಸಮರ್ಪಿಸಿದರು. ನಂತರ ಮುಖ್ಯ ಅತಿಥಿಗಳು ಮತ್ತು ಗಣ್ಯರು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಸಾಂಪ್ರದಾಯಿಕ ತುಳುನಾಡಿನ ಅಡುಗೆಯ ಮಳಿಗೆಗಳನ್ನು (ಫುಡ್ ಸ್ಟಾಲ್) ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದ ನಂತರ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಆಹಾರ ಮಳಿಗೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳು ತಯಾರಿಸಿದ್ದ ವಿವಿಧ ಬಗೆಯ ಸಾಂಪ್ರದಾಯಿಕ ಖಾದ್ಯಗಳ ರುಚಿಯನ್ನು ಸವಿದರು.
ತದನಂತರ, ತುಳುನಾಡಿನ ಭವ್ಯ ಪರಂಪರೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಒಳಾಂಗಣ ಮತ್ತು ಹೊರಾಂಗಣದ ಜಾನಪದ ಕ್ರೀಡೆಗಳು ಹಬ್ಬದ ವಾತಾವರಣಕ್ಕೆ ಮತ್ತಷ್ಟು ಕಳೆ ತಂದವು ಹಾಗೂ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಪದವಿ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಮಿಸ್ ಸಾರಿಕ್ ಅಂಕಿತಾರವರ ಉಸ್ತುವಾರಿಯಲ್ಲಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಸೋಫಿಯಾ ಎನ್ ಫೆರ್ನಾಂಡಿಸ್ ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
