ಸುಳ್ಯ: ಕ್ಯಾನ್ಸರ್ ಬಗ್ಗೆ ಮುಂಚಿತವಾಗಿ ಅರಿವು ಮೂಡಿಸುವುದೇ ಅದನ್ನು ತಡೆಗಟ್ಟುವ ಏಕೈಕ ಮಾರ್ಗವಾಗಿದ್ದು, ಇಂತಹ ಅಭಿಯಾನಗಳು ಪ್ರತಿ ಮನೆಗೂ ತಲುಪಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ರೋಟರಿ ಕ್ಲಬ್ ಸುಳ್ಯ ಮತ್ತು ಸುಳ್ಯ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಅರಿವೇ ಜೀವ – ಬದುಕು” ಮಹಾ ಕ್ಯಾನ್ಸರ್ ಜಾಗೃತಿ ಅಭಿಯಾನವನ್ನು ರೋಟರಿ ಸಮುದಾಯ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಸಂಘ ಸಂಸ್ಥೆಗಳನ್ನು ಬಳಸಿಕೊಂಡು ಸಾವ೯ಜನಿಕರಿಗೆ ಕ್ಯಾನ್ಸರ್ ಮಾಹಿತಿ ನೀಡಬೇಕಾದ ಅನಿವಾರ್ಯತೆ ಇದೆ. ರೋಟರಿ ಮತ್ತು ಪತ್ರಕತ೯ರ ಈ ಕೆಲಸ ಶ್ಲಾಘನೀಯ ಎಂದು ಸಚಿವ ಯು ಟಿ ಖಾದರ್ ಹೇಳಿದರು.
ಆರೋಗ್ಯವಂತ ಸಮಾಜ ನಿರ್ಮಾಣ ಅಂದರೆ ಅದು ಈಗಿನ ಮಕ್ಕಳಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ ಶಾಲಾ ಆವರಣದಲ್ಲಿ ಜಂಕ್ ಫುಡ್ ಮಾರಾಟ ನಿಷೇಧಿಸಲಾಗಿದೆ. ಆಹಾರವೇ ಔಷಧ. ಮಕ್ಕಳ ತಂದೆ ತಾಯಿ ಮಕ್ಕಳಿಗೆ ಯಾವ ರೀತಿಯ ಆಹಾರ ಅಗತ್ಯ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಯು. ಟಿ ಖಾದರ್ ಸಲಹೆ ನೀಡಿದರು.

*ಅಭಿಯಾನದ ಪ್ರಮುಖ ಅಂಶಗಳು:*
– *ತಜ್ಞ ವೈದ್ಯರಿಂದ* ಸಾರ್ವಜನಿಕರಿಗೆ ಕ್ಯಾನ್ಸರ್ ಬಗ್ಗೆ ಮಾಹಿತಿ
– *ವಿದ್ಯಾರ್ಥಿಗಳ ಮೂಲಕ* ಮಾಹಿತಿ ಕರಪತ್ರ ವಿತರಣೆ
– *ರೋಗಿಗಳ ಸಮೀಕ್ಷೆ* ಮತ್ತು ಉಚಿತ ತಪಾಸಣೆಗೆ ಮಾರ್ಗದರ್ಶನ
– *ಮಾಹಿತಿ ಮತ್ತು ಸೇವಾ ಕೇಂದ್ರ* ವ್ಯವಸ್ಥೆ
– *ಅನಿವಾರ್ಯ ಸಂದರ್ಭದಲ್ಲಿ ಆರ್ಥಿಕ ನೆರವು*

ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಾಫ, ರಾಜ್ಯ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ಮುಖ್ಯ ಅತಿಥಿಯಾಗಿದ್ದರು. ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ರೋಟರಿ ಶಾಲಾ ಸಂಚಾಲಕ ಪ್ರಭಾಕರ ನಾಯರ್, ರೋಟರಿ ಕ್ಲಬ್ ಸದಸ್ಯ ಮಧುಸೂದನ್ ಕುಂಭಕೋಡು ಇದ್ದರು.
ಸುಳ್ಯ ತಾಲ್ಲೂಕು ಕಾಯ೯ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆಲ೯ಂಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಕ್ಕಳೊಂದಿಗೆ ಪೋಟೋ ಕ್ಲಿಕ್ಕಿಸಿದ ಸಚಿವರು :
ಆರೋಗ್ಯ ಸಚಿವ ಯು. ಟಿ ಖಾದರ್ ಅವರು ಸಭಾ ಕಾರ್ಯಕ್ರಮದ ಬಳಿಕ ಅಲ್ಲಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಮಕ್ಕಳೇ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಜಂಕ್ ಫುಡ್ ತಿನ್ನಲು ತಂದೆ ತಾಯಿಯೊಂದಿಗೆ ಒತ್ತಾಯ ಮಾಡಬೇಡಿ. ಉತ್ತಮ ಆಹಾರ ಸೇವಿಸಿ, ಯೋಗ ಪ್ರಾಣಾಯಾಮಗಳನ್ನು ಮಾಡಿ ಆರೋಗ್ಯವಂತರಾಗಿ ಬಾಳಿ ಎಂದು ಕಿವಿಮಾತು ಹೇಳಿದರು.
