DAKSHINA KANNADAHOMELATEST NEWS

ಬಾರ್‌ಗಳ ಮೇಲೆ ಅಬಕಾರಿ ಅಧಿಕಾರಿಗಳ ದಿಢೀರ್ ದಾಳಿ

ಮಂಗಳೂರು: ಯುವ ಪೀಳಿಗೆ ಹಾಗೂ ಅಪ್ರಾಪ್ತ ವಯಸ್ಕರು ಮದ್ಯದ ವ್ಯಸನಕ್ಕೆ ಒಳಗಾಗುವುದನ್ನು ತಡೆಯುವ ನಿಟ್ಟಿನಲ್ಲಿ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯದೊಂದಿಗೆ ಆಹಾರ ಪೂರೈಸುವ ಬಾರ್‌ಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ಬುಧವಾರ ರಾತ್ರಿ ದಿಢೀರ್ ದಾಳಿ ನಡೆಸಿ ವ್ಯಾಪಕ ತಪಾಸಣೆ ಕೈಗೊಂಡಿದೆ.

ದಾಳಿಯ ಸಂದರ್ಭದಲ್ಲಿ ಬಾರ್‌ಗಳಲ್ಲಿದ್ದ ಗ್ರಾಹಕರ ಗುರುತಿನ ಚೀಟಿಗಳನ್ನು (ID Cards) ಪರಿಶೀಲಿಸಲಾಯಿತು. ಯಾವುದೇ ಕಾರಣಕ್ಕೂ ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಸಬಾರದು ಎಂದು ಸನ್ನದುದಾರರಿಗೆ (ಬಾರ್ ಮಾಲೀಕರಿಗೆ) ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ನಿಯಮ ಉಲ್ಲಂಘಿಸಿ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡುವುದು ಕಂಡುಬಂದಲ್ಲಿ ಪರವಾನಗಿ ರದ್ದುಪಡಿಸುವುದೂ ಸೇರಿದಂತೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತೀವ್ರ ಎಚ್ಚರಿಕೆ ನೀಡಿದ್ದಾರೆ.

ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಅವರ ಕಡಕ್ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಯನ್ನು ಮಂಗಳೂರು ಉಪವಿಭಾಗ 1 ರ ಉಪ ಅಧೀಕ್ಷಕಿ ಗಾಯತ್ರಿ ಸಿ. ಹೆಚ್. ಅವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಚೇತನ್ ಕುಮಾರ್, ಪ್ರತಿಭಾ, ಮಿಲ್ಲರ್ ಜಾನ್ಸನ್ ಡಿಸೋಜ, ಕಮಲ, ದತ್ತಗುರು, ಉಪನಿರೀಕ್ಷಕರಾದ ರಜಾಕ್, ಜಯಪ್ಪ ಹಾಗೂ ಪೇದೆಗಳಾದ ಸಂದೀಪ್, ಸಂಧ್ಯಾ, ಶಿವಲಿಂಗಪ್ಪ, ಆನಂದ್, ಮಂಜಪ್ಪ ಮತ್ತು ದೇವರಾಜ್ ಪಾಲ್ಗೊಂಡಿದ್ದರು.

Share News