LATEST NEWS

ಸಂಘನಿಕೇತನದಲ್ಲಿ 79ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಭಕ್ತಿ-ಭಾವದ ಮೃತ್ತಿಕಾ ವಿಗ್ರಹ ಮೆರವಣಿಗೆ

ಮಂಗಳೂರು: ನಗರದ ಪ್ರತಾಪ ನಗರದಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ 79ನೇ ವರ್ಷದ ಪ್ರಯುಕ್ತ ಶ್ರೀ ದೇವರ ಮೃತ್ತಿಕಾ ವಿಗ್ರಹದ ವೈಭವದ ಮೆರವಣಿಗೆಯು ಭಾನುವಾರ ಭಕ್ತಿ-ಸಂಭ್ರಮದಿಂದ ನೆರವೇರಿತು.

ನಗರದ ದಿವಂಗತ ಮೋಹನ್ ರಾವ್ ಅವರ ಮನೆಯಲ್ಲಿ ಆಕರ್ಷಕವಾಗಿ ಸಿದ್ಧಗೊಂಡಿದ್ದ ಗಣೇಶ ಮೂರ್ತಿಯನ್ನು ಭವ್ಯ ಮೆರವಣಿಗೆಯ ಮುಖೇನ ಸಂಘನಿಕೇತನಕ್ಕೆ ತರಲಾಯಿತು. ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿಯ ಸ್ವಯಂಸೇವಕರು ಭುಜ ಸೇವೆಯ ಮೂಲಕ ಮೃತ್ತಿಕಾ ಮೂರ್ತಿಯನ್ನು ಹೊತ್ತು ತಂದು ಭಕ್ತಿ ಸಮರ್ಪಿಸಿದರು. ಈ ಗಣೇಶೋತ್ಸವವು ಒಟ್ಟು ಐದು ದಿನಗಳ ಪರ್ಯಂತ ವಿಜೃಂಭಣೆಯಿಂದ ನಡೆಯಲಿದ್ದು, ಪ್ರತಿದಿನ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮಂಗಳೂರು ಮಹಾನಗರ ಸಂಘಚಾಲಕ ಡಾ. ಸತೀಶ್ ರಾವ್ ಹಾಗೂ ವಿಭಾಗ ಪ್ರಚಾರಕ ಶ್ರೀ ಸುರೇಶ್ ಜಿ. ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್‌ನ ಉಪಾಧ್ಯಕ್ಷ ಶ್ರೀ ಕೆ. ರಘುವೀರ್ ಕಾಮತ್, ಕಾರ್ಯದರ್ಶಿ ಗಜಾನನ ಪೈ, ಸೇವಾ ಭಾರತಿ ಪ್ರಮುಖ ವಿನೋದ್ ಶೆಣೈ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಶ್ರೀ ಆನಂದ ಪಾಂಗಳ, ಶ್ರೀ ಕೆ. ಪದ್ಮನಾಭ, ಸ್ಮಿತಾ ಎಂ., ಪ್ರಧಾನ ಕಾರ್ಯದರ್ಶಿ ಶ್ರೀ ಜಿ. ಸುರೇಶ್ ವಿ. ಕಾಮತ್, ಕೋಶಾಧಿಕಾರಿ ಶ್ರೀ ರಂಗನಾಥ್ ಹಾಗೂ ಜೊತೆಕಾರ್ಯದರ್ಶಿಗಳಾದ ನಂದನ್ ಮಲ್ಯ, ಜೀವನರಾಜ್ ಶೆಣೈ, ಗಣೇಶ್ ಪ್ರಸಾದ್ ಹಾಗೂ ಪೂರ್ಣಿಮಾ ಶೆಣೈ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.

Share News