ಮಂಗಳೂರು: ನಗರದ ರೊಸಾರಿಯೊ ಕ್ಯಾಥೆಡ್ರಲ್‌ನ ಯುವಜನ ಆಯೋಗ, ಐಸಿವೈಎಂ (ICYM) ಮತ್ತು ವೈಸಿಎಸ್ (YCS) ರೊಸಾರಿಯೊ ಘಟಕಗಳ ಜಂಟಿ ಆಶ್ರಯದಲ್ಲಿ 16ರಿಂದ 30 ವರ್ಷ ವಯಸ್ಸಿನ ಯುವಜನರಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಯುವ ಸ್ಪರ್ಶ 2026’ ಕಾರ್ಯಕ್ರಮವು ಸೆಪ್ಟೆಂಬರ್ 13ರ ಭಾನುವಾರ ರೊಸಾರಿಯೊ ಸಾಂಸ್ಕೃತಿಕ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಯುವಜನರಲ್ಲಿ ಸ್ನೇಹ, ಸಹಭಾಗಿತ್ವ, ಸಂವಾದ ಹಾಗೂ ಸಮುದಾಯದ ಮನೋಭಾವವನ್ನು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವು ಕಲಿಕೆ ಮತ್ತು ಮನರಂಜನೆಯ ಸುಂದರ ಸಂಗಮವಾಗಿ ಮೂಡಿಬಂದಿತು. ರೊಸಾರಿಯೊ ಕ್ಯಾಥೆಡ್ರಲ್‌ನ ಪ್ರಧಾನ ಧರ್ಮಗುರುಗಳಾದ ಫಾ. ವಲೇರಿಯನ್ ಡಿಸೋಜಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ‘ಭಾವನಾತ್ಮಕ ಯೋಗಕ್ಷೇಮ ಮತ್ತು ಒತ್ತಡ ನಿರ್ವಹಣೆ’ (Emotional Well-being and Stress Management) ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿ ರೊಸಿತಾ ಮೋನಿಕಾ ಸಿಕ್ವೇರಾ ಅವರು ಉಪನ್ಯಾಸ ನೀಡಿದರು. ಇಂದಿನ ಆಧುನಿಕ ದೈನಂದಿನ ಜೀವನದಲ್ಲಿ ಯುವಜನರು ಎದುರಿಸುತ್ತಿರುವ ಮಾನಸಿಕ ಒತ್ತಡಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮತ್ತು ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳುವ ಕುರಿತು ಅವರು ಪ್ರಾಯೋಗಿಕ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಯುವಜನ ಆಯೋಗದ ಸಂಚಾಲಕಿ
ಲಿಲ್ಲಿ ಕುಟಿನ್ಹಾ ಸ್ವಾಗತಿಸಿದರು. ಫಾ. ಪ್ರದೀಪ್ ರೊಡ್ರಿಗಸ್, ಪಾಲನಾ ಮಂಡಳಿಯ ಉಪಾಧ್ಯಕ್ಷ ಸಿರಿಲ್ ರೊಸಾರಿಯೊ, ಕಾರ್ಯದರ್ಶಿ ಐಡಾ ಫುರ್ಟಾಡೊ, 21 ಆಯೋಗಗಳ ಸಂಯೋಜಕ ಆಲ್ಡ್ರಿನ್ ವಾಜ್, ICYM ರೊಸಾರಿಯೊ ಅಧ್ಯಕ್ಷೆ ವಿಯೋಲಾ ಕೊರೆಯಾ ಹಾಗೂ ಅಡ್ಲಿನ್ ಅಲ್ವಾರೆಸ್ ಉಪಸ್ಥಿತರಿದ್ದರು.
YCS ರೊಸಾರಿಯೊ ಅಧ್ಯಕ್ಷ ಜೋಶುವಾ ಡಿಸೋಜಾ ವಂದಿಸಿದರು. ವಿನಯ್ ಸೆರಾವೊ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ನೂರಾರು ಯುವಜನರು ಉತ್ಸಾಹದಿಂದ ಭಾಗವಹಿಸಿದ್ದರು.












