COMMUNITY NEWSLATEST NEWS

ಮಂಗಳೂರಿನಲ್ಲಿ ಸೌಹಾರ್ದತೆ ಮೆರೆಯುತ್ತಿರುವ ಗಣೇಶೋತ್ಸವ

ಮಂಗಳೂರು, : ಕರಾವಳಿಯಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ಸೌಹಾರ್ದತೆಯ ಆಚರಣೆಗೆ ಮಂಗಳೂರು ಮತ್ತೊಮ್ಮೆ ಸಾಕ್ಷಿಯಾಗುತ್ತಿದೆ. ಜಪ್ಪಿನಮೊಗರು ಕಡೆಕಾರಿನ ನಿವಾಸಿ ಹರ್ಬರ್ಟ್ ಡಿಸೋಜಾ ಅವರು ತಮ್ಮ ಗದ್ದೆಯಲ್ಲಿ ಭತ್ತ ಬೆಳೆದು ಉಚಿತವಾಗಿ ತೆನೆ ವಿತರಿಸುತ್ತಿರುವುದು ಒಂದೆಡೆಯಾದರೆ, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯು ಸಂಘನಿಕೇತನದ ಗಣೇಶೋತ್ಸವದಲ್ಲಿ ಭಾಗವಹಿಸುತ್ತಿರುವುದು ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆಯಾಗಿ ಮೂಡಿಬಂದಿದೆ.

15 ವರ್ಷಗಳಿಂದ ನಿರಂತರ ನಿಸ್ವಾರ್ಥ ಸೇವೆ

78 ವರ್ಷದ ಆಟೋ ಚಾಲಕ ಹರ್ಬರ್ಟ್ ಡಿಸೋಜಾ ಅವರು ಕಳೆದ 15ಕ್ಕೂ ಅಧಿಕ ವರ್ಷಗಳಿಂದ ತಮ್ಮ ಸ್ವಂತ ಖರ್ಚಿನಲ್ಲಿ ಗದ್ದೆ ಹದ ಮಾಡಿ ಭತ್ತ ಬೆಳೆಯುತ್ತಿದ್ದಾರೆ. ಹದಿನೈದು ವರ್ಷಗಳ ಹಿಂದೆ ಚರ್ಚ್‌ನಲ್ಲಿ ಗುರಿಕಾರರಾಗಿದ್ದಾಗ, ಮೊಂತಿ ಫೆಸ್ತ್ (ತೆನೆ ಹಬ್ಬ) ಸಂದರ್ಭದಲ್ಲಿ ಸರಿಯಾಗಿ ತೆನೆ ಸಿಗದೆ ಅನುಭವಿಸಿದ ಬೇಸರವೇ ಇವರಲ್ಲಿ ಸ್ವತಃ ಬೇಸಾಯ ಮಾಡುವ ಆಲೋಚನೆ ಮೂಡಿಸಿತು.

ಪ್ರಸ್ತುತ ಇವರ 80 ಸೆಂಟ್ಸ್ ಗದ್ದೆಯಲ್ಲಿ ಬೆಳೆಯುವ ಪೈರು ಮಂಗಳೂರು ಸುತ್ತಮುತ್ತಲಿನ 40ಕ್ಕೂ ಅಧಿಕ ದೇವಸ್ಥಾನಗಳು ಹಾಗೂ 30ಕ್ಕೂ ಹೆಚ್ಚು ಚರ್ಚ್‌ಗಳಿಗೆ ಉಚಿತವಾಗಿ ರವಾನೆಯಾಗುತ್ತಿದೆ. ಗಣೇಶೋತ್ಸವ ಮತ್ತು ಮೊಂತಿ ಫೆಸ್ತ್ ಹಬ್ಬದ ಸಂದರ್ಭದಲ್ಲಿ ನೂರಾರು ಮಂದಿ ಇವರ ಗದ್ದೆಯಿಂದಲೇ ಬಂದು ಉಚಿತವಾಗಿ ತೆನೆ ಕೊಂಡೊಯ್ಯುತ್ತಾರೆ.

ಹಕ್ಕಿಗಳನ್ನು ಓಡಿಸಲು ವಿಶಿಷ್ಟ ತಂತ್ರಜ್ಞಾನ: ಮಾದರಿ ಬೇಸಾಯ

ಬೇಸಾಯದ ಸಂದರ್ಭದಲ್ಲಿ ಕಾಡುವ ಹಕ್ಕಿಗಳ ಕಾಟ ತಪ್ಪಿಸಲು ಹರ್ಬರ್ಟ್ ಅವರು ವಿಶಿಷ್ಟ ತಂತ್ರ ಹೆಣೆದಿದ್ದಾರೆ. ಸುಮಾರು 30 ಸಾವಿರ ರೂ. ವೆಚ್ಚದಲ್ಲಿ ಇಡೀ ಗದ್ದೆಗೆ ಬಲೆ ಕಟ್ಟಿದ್ದಾರೆ. ಇದರೊಂದಿಗೆ ಮತ್ತೊಂದು ಗದ್ದೆಗೆ ಸಂಪೂರ್ಣ ಹಗ್ಗಗಳನ್ನು ಕಟ್ಟಿ ಅದಕ್ಕೆ ಪ್ಲಾಸ್ಟಿಕ್ ಚೂರುಗಳನ್ನು ಸಿಕ್ಕಿಸಿದ್ದಾರೆ. ಮನೆಯಿಂದಲೇ ಹಗ್ಗ ಎಳೆಯುವ ಮೂಲಕ ಪ್ಲಾಸ್ಟಿಕ್ ಸದ್ದು ಮಾಡಿ ಹಕ್ಕಿಗಳನ್ನು ಓಡಿಸುವ ಇವರ ಮಾದರಿ ಕೃಷಿ ಪದ್ಧತಿ ಎಲ್ಲರ ಗಮನ ಸೆಳೆಯುತ್ತಿದೆ.

ಮೊಂತಿ ಫೆಸ್ತ್ ಹಾಗೂ ಗಣೇಶೋತ್ಸವದ ವೇಳೆ ಎಲ್ಲರಿಗೂ ತೆನೆ ಸಿಗುವಂತೆ ಬೇಸಾಯ ಮಾಡುತ್ತಿದ್ದೇನೆ. ಯಾರಿಂದಲೂ ಯಾವುದೇ ಹಣ ಪಡೆಯುವುದಿಲ್ಲ. ನನ್ನ ಈ ಕೆಲಸಕ್ಕೆ ಪತ್ನಿ ಫ್ರೀಡಾ ಅವರ ಪೂರ್ಣ ಸಹಕಾರವಿದೆ. ಈ ನಿಸ್ವಾರ್ಥ ಸೇವೆಯಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ.”ಎಂದು ಕೃಷಿಕ ಹರ್ಬರ್ಟ್ ಡಿ’ಸೋಜಾ, ತಿಳಿಸಿದರು.

ಸಂಘನಿಕೇತನಕ್ಕೆ ಕ್ರೈಸ್ತ ಮುಖಂಡರ ಸೌಹಾರ್ದ ಭೇಟಿ:

ಸಂಘನಿಕೇತನದಲ್ಲಿ ನಡೆಯುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ. ಕ್ರೈಸ್ತ ಮುಖಂಡರ ನಿಯೋಗವು ಹಿಂದೂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿ, ಸೌಹಾರ್ದತೆಗಾಗಿ ಪ್ರಾರ್ಥಿಸಿ, ಒಟ್ಟಿಗೆ ಉಪಹಾರ ಸೇವಿಸುವ ಸಂಪ್ರದಾಯವನ್ನು ಮುಂದುವರಿಸಿ ಕೊಂಡು ಬಂದಿದೆ. “ಗಣೇಶೋತ್ಸವವನ್ನು ಧಾರ್ಮಿಕ ಹಬ್ಬದ ಜೊತೆಗೆ ನಾವು ರಾಷ್ಟ್ರೀಯ ಹಬ್ಬವೆಂದೇ ಗೌರವಿಸುತ್ತೇವೆ” ಎಂದು ರಾಷ್ಟ್ರೀಯವಾದಿ ಕ್ರೈಸ್ತ ವೇದಿಕೆಯ ಸಂಚಾಲಕ ಫ್ರ್ಯಾಂಕ್ಲಿನ್ ಮೊಂತೇರೊ ತಿಳಿಸಿದ್ದಾರೆ.

Share News