ಮಂಗಳೂರು, ಆಗಸ್ಟ್ 20: “ಹೇಗೆ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಬಲಿದಾನ ಮಾಡಿದ್ದಾರೋ, ಅದೇ ರೀತಿ ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರಕಿಸಲು ನಮ್ಮ ಪೂರ್ವಸೂರಿಗಳು ಅಪಾರ ಸೇವೆ ಮತ್ತು ತ್ಯಾಗ ಮಾಡಿದ್ದಾರೆ. ಇಂದಿನ ಡಿಜಿಟಲ್ ಮಾಧ್ಯಮದ ಯುಗದಲ್ಲಿ ಕೊಂಕಣಿ ಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ದೊಡ್ಡ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ,” ಎಂದು ಹಿರಿಯ ಕೊಂಕಣಿ ಸಾಹಿತಿ ಡೇವಿಡ್ ಡಿಸೋಜ ವಾಮಂಜೂರು ಹೇಳಿದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಾಂಡ್ ಸೊಭಾಣ್ ಸಹಯೋಗದಲ್ಲಿ ಶಕ್ತಿನಗರದ ಕಲಾಂಗಣದಲ್ಲಿ ಆಯೋಜಿಸಿದ್ದ ’35ನೇ ಕೊಂಕಣಿ ಮಾನ್ಯತಾ ದಿನಾಚರಣೆ’ಯ ಸಂದರ್ಭದಲ್ಲಿ ಕೊಂಕಣಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ:ಲುವಿ ಪಿಂಟೊ
ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿ ಪಿಂಟೊ ಶುಭ ಹಾರೈಸಿ ಮಾತನಾಡಿ, “ಇಂದಿನ ಪೀಳಿಗೆಯು ಭಾಷೆಯ ಮಾನ್ಯತೆಗಾಗಿ ಹೋರಾಟ ನಡೆಸಬೇಕಾದ ಅಗತ್ಯವಿಲ್ಲ. ಬದಲಾಗಿ, ಈ ದಿನವನ್ನು ಒಂದು ಹಬ್ಬದಂತೆ ಸಂಭ್ರಮಿಸಿ, ಭಾಷೆಯ ಉನ್ನತಿಯನ್ನು ಅನುಭವಿಸುತ್ತಾ ಅದರ ಬಗ್ಗೆ ಹೆಮ್ಮೆ ಮತ್ತು ಅಭಿಮಾನವನ್ನು ಬೆಳೆಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದಾರೆ,” ಎಂದರು.

ಸಂವಿಧಾನ ಮಾನ್ಯತೆಯ ಹೆಮ್ಮೆ ನಮ್ಮದಾಗಲಿ: ಜೋಕಿಂ ಸ್ಟ್ಯಾನಿ ಆಲ್ವಾರಿಸ್
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತ ಕೋರಿದ ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರು, “ಯುವ ಜನತೆಯಲ್ಲಿ ಕೊಂಕಣಿ ಭಾಷೆಯ ಬಗ್ಗೆ ಒಲವು ಮೂಡಿಸಲು ಅಕಾಡೆಮಿ ಇಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ದೇಶದ ಸಾವಿರಾರು ಭಾಷೆಗಳ ಪೈಕಿ ಕೇವಲ 22 ಭಾಷೆಗಳಿಗೆ ಮಾತ್ರ ಸಂವಿಧಾನದ ಮಾನ್ಯತೆ ದೊರೆತಿದ್ದು, ಕೊಂಕಣಿ ಅದರಲ್ಲಿ ಒಂದು ಎಂಬ ಹೆಮ್ಮೆ ನಮ್ಮದಾಗಬೇಕು,” ಎಂದು ಕರೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕಲಾಂಗಣದ ಮಹಾದ್ವಾರದಿಂದ ಆಕರ್ಷಕ ಹಾಗೂ ರಂಗು ರಂಗಿನ ಮೆರವಣಿಗೆ ನಡೆಯಿತು. ತದನಂತರ ಕೊಂಕಣಿ ಗೀತೆಗಳ ಗಾಯನ ನೆರವೇರಿತು. ಧ್ವಜಾರೋಹಣದ ನಂತರ ಉಭಯ ಜಿಲ್ಲೆಗಳಿಂದ (ದಕ್ಷಿಣ ಕನ್ನಡ ಮತ್ತು ಉಡುಪಿ) ಆಗಮಿಸಿದ್ದ 17 ಪ್ರೌಢ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿ ತಂಡಗಳಿಗಾಗಿ ವಿವಿಧ ವಿನೋದಾವಳಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ವೇದಿಕೆಯಲ್ಲಿ ಅಕಾಡೆಮಿ ಮತ್ತು ಮಾಂಡ್ ಸೊಭಾಣ್ ಸಂಘಟನೆಯ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ನವೀನ್ ಲೋಬೊ ಧನ್ಯವಾದ ಸಮರ್ಪಿಸಿದರು. ಸಮರ್ಥ್ ಭಟ್ ಕಾರ್ಯಕ್ರಮ ನಿರೂಪಿಸಿದರು.







