COMMUNITY NEWSDAKSHINA KANNADAHOMELATEST NEWS

ಸಾಮಾಜಿಕ ಪಿಡುಗಗಳ ನಿವಾರಣೆಗೆ ಸಮುದಾಯ ಸಕ್ರಿಯವಾಗಲಿ:ಅ|ವಂ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ

ಮಂಗಳೂರು,ಆ.20: ಮಂಗಳೂರು ವಿಶ್ವವಿದ್ಯಾನಿ ಲಯದ ಕ್ರೈಸ್ತ ಅಧ್ಯಯನ ಪೀಠ ಹಾಗೂ ಜಪ್ಪು ಸಂತ ಜೋಸೆಫರ ಸೆಮಿನರಿಯ ಸಹಯೋಗದಲ್ಲಿ ಭಾರತದಲ್ಲಿ ಕ್ರೈಸ್ತ ಚಿಂತನೆ: ಸಂಸ್ಕೃತಿ, ನಂಬಿಕೆ ಮತ್ತು ಸಾಮಾಜಿಕ ಪರಿವರ್ತನೆ ಎಂಬ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಗುರುವಾರ ಜಪ್ಪು ಸಂತ ಜೋಸೆಫರ ಸೆಮಿನರಿಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು, ಭಾರತದಲ್ಲಿ ಜಾತಿ ಮತ್ತು ಲಿಂಗ ತಾರತಮ್ಯದಂತಹ ಸಾಮಾಜಿಕ ಪಿಡುಗಗಳನ್ನು ಕ್ರೈಸ್ತ ಸಮುದಾಯ ಸಕ್ರಿಯವಾಗಿ ಎದುರಿಸಬೇಕು. ಕೋವಿಡ್ ಕಾಲದಲ್ಲಿ ಪೋಪ್ ಫ್ರಾನ್ಸಿಸ್ ಅವರು ನೀಡಿದ ಸಾರ್ವತ್ರಿಕ ಭ್ರಾತೃತ್ವದ ಕರೆಗೆ ಓಗೊಟ್ಟು, ಪ್ರತಿಯೊಬ್ಬ ಮನುಷ್ಯನೂ ನನ್ನ ಸಹೋದರ- ಸಹೋದರಿ ಯಾಗಿದ್ದು, ಅಸಡ್ಡೆಯಿಂದ ಕರುಣೆಯೆಡೆಗೆ, ಬಹಿಷ್ಕಾರದಿಂದ ಒಳಗೊಳ್ಳುವಿಕೆಯೆಡೆಗೆ ತೆರಳಬೇಕು. ಬಂಧುತ್ವ ನೆಲೆಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಮುಖ್ಯಸ್ಥೆ ಡಾ| ಪ್ರೀತಿ ಡಿಸೋಜ ಮಾತನಾಡಿ, ಭಾರತೀಯ ಸಂವಿಧಾನದ ಪೀಠಿಕೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದ ಮೂಲಭೂತ ತತ್ವಗಳನ್ನು ಒಳಗೊಂಡಿದೆ. ಚರ್ಚ್‌ನಲ್ಲಿರುವ ನಂಬಿಗಸ್ತ ಸಮುದಾಯವು ಜನರು ಒಟ್ಟಾಗಿ ಬದಲಾವಣೆಯನ್ನು ತರುವ ಪ್ರಜಾಸತ್ತಾತ್ಮಕ ಆದರ್ಶಗಳನ್ನು ಬಿಂಬಿಸುತ್ತದೆ ಎಂದರು.

ನ್ಯಾಷನಲ್ ಕೆಡೆಟ್ ಕಾರ್ಪ್ಸ್ ನ ಕರ್ನಲ್ ಶ್ರೇಣಿಯೊಂದಿಗೆ ಕರ್ನಲ್ ಕಮಾಂಡೆಂಟ್ ಆಗಿ ನೇಮಕಗೊಂಡಿರುವ ಮಂಗಳೂರಿನ ಸಂತ ಅಲೋಶಿಯಸ್ ವಿವಿಯ ಕುಲಪತಿ ವಂ|ಡಾ| ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರನ್ನು ಸಮ್ಮಾನಿಸಲಾಯಿತು. ಜಪ್ಪು ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ವಂ|ಡಾ| ರಾಜೇಶ್ ಮೆಲ್ವಿನ್ ರೊಸಾರಿಯೊ ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯೆ ಜುಡಿತ್ ಮೆಂಡೋನ್ಸಾ, ವಿವಿಯ ಕ್ರೈಸ್ತ ಅಧ್ಯಯನ ಪೀಠದ ಮುಖ್ಯಸ್ಥ ವಂ|ಡಾ| ಸುನಿಲ್ ಜಾರ್ಜ್ ಡಿಸೋಜ ಇದ್ದರು.
ಬ್ರ| ಜಸ್ಟಿನ್ ಡಿಸೋಜಾ ನಿರೂಪಿಸಿದರು. ಸಂತ ಆಗ್ನೆಸ್ ಪಿಯು ಕಾಲೇಜಿನ ಸಿ| ಜಾನೆಟ್ ಎ.ಸಿ. ಸಹಕರಿಸಿದರು.

ಸಾಮಾಜಿಕ ಸುಧಾರಣೆಯಲ್ಲಿ ಕ್ರೈಸ್ತ ನಾಯಕತ್ವ, ಡಿಜಿಟಲ್ ಸಂಸ್ಕೃತಿ, ಸ್ಥಳೀಯ ಆಚರಣೆಗಳು, ಬೈಬಲ್ ವ್ಯಾಖ್ಯಾನ ಹಾಗೂ ಶಿಕ್ಷಣ-
ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಕುರಿತು ಗೋಷ್ಠಿಗಳು ನಡೆದವು.

ಸಾಮಾಜಿಕ ಸುಧಾರಣೆಗೆ ಸ್ವದೇಶಿ ಚಿಂತಕರ ಪ್ರಭಾವ
ಸಮಾಜ ವಿಜ್ಞಾನಿ ಹಾಗೂ ದೆಹಲಿಯ ಜೆಎನ್‌ಯು ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ| ವಲೇರಿಯನ್ ರೋಡ್ರಿಗಸ್ ಮಾತನಾಡಿ, ಭಾರತದ ಸಾಮಾಜಿಕ ಸುಧಾರಣೆ, ಪ್ರಜಾಪ್ರಭುತ್ವ ಮತ್ತು ಜಾತಿ ವಿರೋಧಿ ಚಳುವಳಿಗಳ ಮೇಲೆ ಸುವಾರ್ತೆ, ಮಹಾತ್ಮ ಗಾಂಧಿ ಮತ್ತು ಡಾ| ಬಿ.ಆರ್. ಅಂಬೇಡ್ಕರ್ ಅವರಂತಹ ಸೃಜನಶೀಲ ಸ್ವದೇಶಿ ಚಿಂತಕರು ಪ್ರಭಾವ ಬೀರಿದ್ದರು. ಸಮಕಾಲೀನ ಸಾಮಾಜಿಕ ಸವಾಲುಗಳನ್ನು ಎದುರಿಸಲು ಭಾರತೀಯ ಕ್ರೈಸ್ತ ಚಿಂತನೆಯೊಂದಿಗೆ ತೊಡಗಿಕೊಳ್ಳುವ ಅಗತ್ಯವಿದೆ ಎಂದರು.

Share News