LATEST NEWS

ಯುವಜನತೆಯಲ್ಲಿ ದೇಶಪ್ರೇಮ ಜಾಗೃತಿ: ಮಂಗಳೂರಿನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ವಾಕಥಾನ್’

ಮಂಗಳೂರು: ಯುವಪೀಳಿಗೆಯಲ್ಲಿ ದೇಶಪ್ರೇಮ, ಸೈನಿಕರ ಬಗ್ಗೆ ಗೌರವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಜಾಗೃತಗೊಳಿಸುವ ಉದ್ದೇಶದಿಂದ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಾಕಥಾನ್ – ಭಾರತಕ್ಕಾಗಿ ನಡಿಗೆ’ ಕಾರ್ಯಕ್ರಮವು ನೂರಾರು ವಿದ್ಯಾರ್ಥಿಗಳ ಅಭೂತಪೂರ್ವ ಉತ್ಸಾಹದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ಭಾರತದ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಪೂರ್ವಭಾವಿಯಾಗಿ ದಿಶಾ ಭಾರತ್, ಕೆನರಾ ಕಾಲೇಜು (ಸ್ವಾಯತ್ತ) ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಘಟಕದ ಜಂಟಿ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.

ಕೊಡಿಯಾಲ್‌ಬೈಲ್‌ನಲ್ಲಿರುವ ಕೆನರಾ ಕಾಲೇಜು ಆವರಣದಿಂದ ಆರಂಭಗೊಂಡ ವಾಕಥಾನ್ ಪಿವಿಎಸ್ ವೃತ್ತದ ಮೂಲಕ ಸಾಗಿ ಟಿ.ವಿ. ರಮಣ್ ಪೈ ಸಭಾಂಗಣದವರೆಗೆ ತಲುಪಿತು. 700ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ದೇಶಭಕ್ತಿಯ ಘೋಷಣೆಗಳೊಂದಿಗೆ ಹೆಜ್ಜೆ ಹಾಕಿ ಕಾರ್ಯಕ್ರಮವನ್ನು ಸಾರ್ಥಕಗೊಳಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ಅವರು ಮಾತನಾಡಿ, “ನಮ್ಮ ರಾಷ್ಟ್ರದ ಹಿರಿಮೆ, ಗರಿಮೆಗಳ ಪುಸ್ತಕಗಳನ್ನು ಯುವಪೀಳಿಗೆ ಓದಬೇಕಾಗಿದೆ. ಆಗ ನಮ್ಮ ದೇಶದ ಸೈನಿಕರ ತ್ಯಾಗ, ಪರಿಶ್ರಮದ ಬಗ್ಗೆ ಅಭಿಮಾನ ಮೂಡುತ್ತದೆ. ನಮ್ಮ ವೀರ ಯೋಧರು ಗಡಿಯಲ್ಲಿ ಪ್ರಾಣದ ಹಂಗು ತೊರೆದು ನಮ್ಮನ್ನು ರಕ್ಷಿಸುವ ಕಾರಣ ನಾವೆಲ್ಲರೂ ನೆಮ್ಮದಿಯಾಗಿದ್ದೇವೆ. ಆದರೆ ಸೈನಿಕರ ಮಹತ್ವ ಗೊತ್ತಿಲ್ಲದವರು ಇತ್ತೀಚೆಗೆ ಜಂತರ್ ಮಂಥರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸೈನಿಕರನ್ನು ಅವಹೇಳನ ಮಾಡುತ್ತಾ ವಿಡಿಯೋ ಮಾಡಿದ್ದಾರೆ. ಅದನ್ನು ನೋಡಿದಾಗ ನಮ್ಮ ಯುವಜನಾಂಗ ಎತ್ತ ಸಾಗುತ್ತಿದೆ ಎನ್ನುವ ಆತಂಕ ಉಂಟಾಗುತ್ತದೆ” ಎಂದು ಕಳಕಳಿ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಅವರು, “ನಾವು ಆಧುನಿಕತೆಯ ಕಾಲಘಟ್ಟದಲ್ಲಿದ್ದೇವೆ. ಜಗತ್ತಿನ ವಿವಿಧ ರಾಷ್ಟ್ರಗಳೊಂದಿಗೆ ಸ್ಪರ್ಧಾತ್ಮಕವಾಗಿ ಇರುವುದು ತಪ್ಪಲ್ಲ. ಆದರೆ ನಮ್ಮತನವನ್ನು, ನಮ್ಮ ಸಂಸ್ಕೃತಿಯನ್ನು ಮರೆಯುವುದು ಸರಿಯಲ್ಲ. ವಿಶ್ವಗುರು ಭಾರತದ ಉತ್ತಮ ಶಿಷ್ಯರಾಗಿ, ಈ ದೇಶದಲ್ಲಿ ಹುಟ್ಟಿರುವ ಭಾಗ್ಯಪಡೆದಿರುವುದಕ್ಕಾಗಿ, ಅದನ್ನು ವ್ಯರ್ಥ ಮಾಡದೇ, ಭಾರತೀಯರಾಗಿ ಬದುಕೋಣ” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಪ್ರಖ್ಯಾತ ನಟ ಹಾಗೂ ನಿರ್ದೇಶಕ ಸ್ವರಾಜ್ ಶೆಟ್ಟಿ ಮಾತನಾಡಿ, “ನಾವು ಯಾರನ್ನೂ ದ್ವೇಷಿಸದೇ ಎಲ್ಲರನ್ನೂ ಪ್ರೀತಿಸುವುದನ್ನು ಕಲಿಯಬೇಕಿದೆ. ಸ್ವಚ್ಛ ಭಾರತದ ಕನಸು ಈಡೇರಬೇಕಾದರೆ ನಾವು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ, ನಮ್ಮ ಪರಿಸರವನ್ನು ಹಾಳು ಮಾಡದೇ ಬದುಕಬೇಕಾಗಿದೆ. ಅನೇಕ ಸಂಘ ಸಂಸ್ಥೆಗಳು ಸ್ವಚ್ಛತೆಯ ಅಭಿಯಾನದಲ್ಲಿ ತೊಡಗಿ ಮಾದರಿ ಕಾರ್ಯ ಮಾಡುತ್ತಿದ್ದಾರೆ. ಆದರೆ ಪರಿಸರ ಹಾಳಾಗಲು ಕೂಡ ನಾವೇ ಕಾರಣರಾಗಿದ್ದೇವೆ, ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸ್ವರಾಜ್ ಶೆಟ್ಟಿ ಅವರನ್ನು ಆಯೋಜಕರ ಪರವಾಗಿ ಸನ್ಮಾನಿಸಲಾಯಿತು.

Share News