ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಅಂಕದ ಅಡ್ಡೆಗೆ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ. ಪೆರುವಾಯಿ ಗ್ರಾಮದ ಸರ್ಕಾರಿ ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಕೃಷಪ್ಪ (59), ಲಕ್ಷ್ಮಣ ನಾಯ್ಕ್ (38), ಶೋಬಿತ್ ರಾಜ್ (29) ಹಾಗೂ ಯುವರಾಜ್ (46) ಎಂದು ಗುರುತಿಸಲಾಗಿದೆ.
ರಹಸ್ಯ ಮಾಹಿತಿ ಮೇರೆಗೆ ಎಸ್‌ಐ ರಾಮಕೃಷ್ಣ ತಂಡದಿಂದ ದಾಳಿ:
ಪೆರುವಾಯಿ ಗ್ರಾಮದ ಪೆರುವಾಯಿ ಮುಚ್ಚಿರಬೆಟ್ಟು ಎಂಬಲ್ಲಿನ ಸರ್ಕಾರಿ ಜಾಗದಲ್ಲಿ ಸಾರ್ವಜನಿಕವಾಗಿ ಹಣ ಮುಖಾಂತರ ಕೋಳಿ ಅಂಕ ಆಯೋಜಿಸ ಲಾಗುತ್ತಿದೆ ಎಂದು ವಿಟ್ಲ ಪೊಲೀಸ್ ಉಪನಿರೀಕ್ಷಕರಾದ (SI) ರಾಮಕೃಷ್ಣ ಅವರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಎಸ್‌ಐ ಮತ್ತು ಸಿಬ್ಬಂದಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಅಕ್ರಮ ಜೂಜಾಟ ನಡೆಯುತ್ತಿರುವುದು ಧೃಢಪಟ್ಟಿದೆ. ಪೊಲೀಸರು ಸ್ಥಳವನ್ನು ಸುತ್ತುವರಿದು ದಾಳಿ ನಡೆಸಿದ್ದಾರೆ.

ನಗದು ಮತ್ತು ಕತ್ತಿಗಳು ಜಪ್ತಿ
ದಾಳಿಯ ವೇಳೆ ಪೊಲೀಸರು ಸ್ಥಳದಲ್ಲಿದ್ದ ಕೋಳಿಗಳನ್ನು ರಕ್ಷಿಸಿದ್ದಾರೆ. ಇದರೊಂದಿಗೆ ಆರೋಪಿಗಳು ಜೂಜಾಟಕ್ಕೆ ಬಳಸಿದ್ದ ರೂ. 3,050/- ನಗದು ಹಣ ಹಾಗೂ ಕೋಳಿ ಅಂಕಕ್ಕೆ ಅಳವಡಿಸುತ್ತಿದ್ದ ಕತ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲು
ಈ ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 203/2026 ರಂತೆ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ (KP Act) ಕಲಂ: 87, 93, ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರ ಕಲಂ: 3, 11 (1)(m)(ii), 11(1)(n) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ: 112 ರ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದ್ದು, ತನಿಖೆ ಮುಂದುವರಿದಿದೆ.
